ಅಂಬೇಡ್ಕರ್ ರವರ ಸಂವಿಧಾನ ದೇಶದ ಎಲ್ಲ ಸಮಸ್ಯೆಗಳಿಗೆ ಔಷಧೀಯ ಗ್ರಂಥ: ಯು.ಟಿ.ಖಾದರ್

ಮಂಗಳೂರು, ಎ.14: ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಲಾದ ಸಂವಿಧಾನ ದೇಶದ ಎಲ್ಲ ಸಮಸ್ಯೆಗಳಿಗೂ ಔಷಧೀಯ ಗ್ರಂಥ. ಸಂವಿಧಾನದ ಆಶಯಕ್ಕೆ ಪೂರಕವಾಗಿ ಆಡಳಿತ ನಡೆಸುವ ಮೂಲಕ ಜನರಿಗೆ ನೆಮ್ಮದಿಯ ವಾತಾವರಣ ನೀಡುವುದು ಸರಕಾರಗಳ ಕರ್ತವ್ಯ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮನಪಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನಶಿಲ್ಪಿ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ರವರ 134ನೆ ಜನ್ಮ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವವರೇ ನಿಜವಾದ ದೇಶ ಪ್ರೇಮಿಗಳಾಗಿದ್ದು, ದೇಶಕ್ಕೆ ಶಕ್ತಿ ತುಂಬುವರಾಗಿರುತ್ತಾರೆ. ಇತಿಹಾಸವನ್ನು ತಿಳಿದಾಗ ಇತಿಹಾಸ ನಿರ್ಮಿಸಲು ಸಾಧ್ಯವಾಗುತ್ತದೆ. ಹಾಗಾಗಿ ಅಂಬೇಡ್ಕರ್ ರವರನ್ನು ಅರ್ಥ ಮಾಡಿಕೊಂಡು ನಮ್ಮ ವ್ಯಕ್ತಿತ್ವದಲ್ಲಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಂವಿಧಾನದ ಪುಸ್ತಕ ಎಲ್ಲರೂ ಓದಬೇಕು ಎಂದು ಅವರು ಕರೆ ನೀಡಿದರು.
ಅಮೆರಿಕ ಮತ್ತು ಫ್ರಾನ್ಸ್ ದೇಶಗಳಲ್ಲಿ 200 ವರ್ಷಗಳ ಮೊದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. ಆದರೇ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಗುರುತಿಸಿರುವ ಭಾರತದಲ್ಲಿ ಸಂವಿಧಾನ ರಚನೆಯ ವೇಳೆ ಅಂಬೇಡ್ಕರ್ ರವರ ಪ್ರಬಲವಾದ ಒತ್ತಡದ ಮೇರೆಗೆ ಪ್ರಜಾಪ್ರಭುತ್ವ ಮಹಿಳೆಯರಿಗೂ ಮತದಾನದ ಹಕ್ಕು ನೀಡಲಾಯಿತು. ಅಂಬೇಡ್ಕರ್ ರವರ ದೂರದೃಷ್ಟಿಯ ಕಾರಣದಿಂದ ರಚಿತವಾದ ಸಂವಿಧಾನದಲ್ಲಿರುವ ಹಕ್ಕುಗಳಿಂದಾಗಿಯೇ ಇಂದು ಪ್ರತಿಯೊಬ್ಬರು ಕಾಶ್ಮೀರದಿಂದ ಕನ್ಯಾಕುಮಾರಿಯವರಗೆ ನಿರ್ಭೀತಿಯಿಂದ ಓಡಾಡಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ರವರು ಈ ದೇಶದ ಅಖಂಡತೆ, ಸಮಗ್ರತೆ ಹಾಗೂ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯಕ್ಕೆ ಪೂರಕವಾದ ಸಂವಿಧಾನ ರಚನೆಯಲ್ಲಿ ಅಭೂತಪೂರ್ವ ಪಾತ್ರ ವಹಿಸಿದ್ದಾರೆ ಎಂದರು.
ಭಾರತವು ಇಂದು ವಿಶ್ವದಲ್ಲಿ 5ನೇ ದೊಡ್ಡ ಶಕ್ತಿಯಾಗಿ ಬೆಳೆಯುವಲ್ಲಿ ಅಂಬೇಡ್ಕರ್ ರವರ ಕೊಡುಗೆಯೂ ಪ್ರಮುಖವಾಗಿದೆ. ಅಂಬೇಡ್ಕರ್ ದೇಶದ ಭೌಗೋಳಿಕ ಏಕತೆಯ ಬಗ್ಗೆ ಮಾತ್ರವಲ್ಲದೆ, ಸಾಂಸ್ಕೃತಿಕ ಏಕತೆಯ ಬಗ್ಗೆಯೂ ಅಪಾರ ನಂಬಿಕೆ ಇಟ್ಟ ಕಾರಣ ಸಂವಿಧಾನ ಇಂದಿಗೂ ಚಿರ ನೂತನವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂಬೇಡ್ಕರ್ ರವರ ಚಿತ್ರ, ಪ್ರತಿಮೆಗೆ ಮಾತ್ರವಲ್ಲದೆ, ಅವರ ವ್ಯಕ್ತಿತ್ವ, ಚಿಂತನೆಗೂ ಗೌರವ ನೀಡಲಾಗಿದೆ. ಅಂಬೇಡ್ಕರ್ ಹುಟ್ಟಿದ ಸ್ಥಳ, ಶಿಕ್ಷಣ ಪಡೆದ, ದೀಕ್ಷೆ ಗಳಿಸಿದ, ಪರಿನಿರ್ವಾಣ ಆದ ಹಾಗೂ ಚೈತ್ಯ ಭೂಮಿಯನ್ನು ಅಭಿವೃದ್ಧಿಪಡಿಸಿ ಪುಣ್ಯ ಕ್ಷೇತ್ರವನ್ನಾಗಿಸುವ ಕಾರ್ಯ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳಲ್ಲಿ ಶಿಕ್ಷಮ ಪಡೆದು 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹಾಗೂ 2024-25ನೆ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರವನ್ನು ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಮುಲ್ಕಿಯ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಪಂ ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಎಸ್ಪಿ ಯತೀಶ್ ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಡಾ. ಹೇಮಲತಾ ಸ್ವಾಗತಿಸಿದರು.