ಅವ್ಯವಸ್ಥೆಯ ಆಗರವಾದ ಅಮೆಮ್ಮಾರ್ ಲೆವೆಲ್ ಕ್ರಾಸ್ ಗೇಟ್
►30ನಿಮಿಷಕ್ಕೂ ಹೆಚ್ಚು ಸಮಯ ರೈಲ್ವೇ ಗೇಟ್ ಬಂದ್ ►ಶಾಲಾ ವಾಹನ, ತುರ್ತು ಸಂದರ್ಭ, ಕೆಲಸ ನಿಮಿತ್ತ ತೆರಳುವ ನಾಗರಿಕರಿಗೆ ಎದುರಾಗುವ ಸಂಕಷ್ಟ

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿಯ 200 ಮೀ ಅಂತರದಲ್ಲಿರುವ ಆಮೆಮ್ಮಾರ್, ಕೊಟ್ಟಿಂಜ, ಅಬ್ಬೆಟ್ಟು, ಮಲ್ಲೂರು, ಕೊಡ್ಮಾಣ್ ಇತ್ಯಾದಿ ಪ್ರದೇಶಗಳಿಗೆ ಸಂಚರಿಸುವ ರಸ್ತೆ ಮಧ್ಯೆ ಸಿಗುವ ಅಮೆಮ್ಮಾರ್ ರೈಲ್ವೇ ಲೆವೆಲ್ ಕ್ರಾಸ್ ಗೇಟ್ ಸಮಸ್ಯೆಯಿಂದ ಇಡೀ ಊರಿನ ನಾಗರಿಕರು ಸಂಕಷ್ಟ ಎದುರಿಸುವಂತಾಗಿದೆ.
ರೈಲ್ವೇ ಗೇಟ್ ಮಾಸ್ಟರ್ ಸೂಚನೆಯಂತೆ 30 ನಿಮಿಷಗಳಿಗಿಂತಲೂ ಅಧಿಕ ಸಮಯ ರೈಲ್ವೇ ಗೇಟ್ ಹಾಕಿ ಸಂಚಾರಕ್ಕೆ ನಿರ್ಬಂಧಿಸಲ್ಪಡುವ ಕಾರಣಗಳಿಂದ ಇಲ್ಲಿನ ಶಾಲಾ ವಾಹನ, ಕೆಲಸಕ್ಕೆ ತೆರಳುವ ಜನಸಾಮಾನ್ಯರು, ಅಗತ್ಯ ತುರ್ತು ಸಂದರ್ಭಗಳಲ್ಲಿ ಇತ್ಯಾದಿ ವಾಹನ ಸಂಚಾರಕ್ಕೆ ಸಂಕಷ್ಟ ಎದುರಿಸುವಂತಾಗಿದೆ
ನಾಗರಿಕರ ಸುರಕ್ಷಾ ಕ್ರಮಕ್ಕಾಗಿ ರೈಲ್ವೇ ಗೇಟ್ ಹಾಕಿದ ನಂತರ ಯಾವುದೇ ತುರ್ತು ಸಂದರ್ಭದಲ್ಲಿಯೂ ಗೇಟ್ ತೆರೆಯುವುದಕ್ಕೆ ರೈಲ್ವೇ ಇಲಾಖೆ ಅವಕಾಶ ಕಲ್ಪಿಸುವುದಿಲ್ಲ.
30ಕ್ಕಿಂತ ಹೆಚ್ಚು ನಿಮಿಷಗಳ ಕಾಲ ಗೇಟ್ ಹಾಕಿ ಸಂಚಾರಕ್ಕೆ ನಿರ್ಬಂಧಿಸುವುದರಿಂದ ಈ ಸಂದರ್ಭದಲ್ಲಿ ವೃತ್ತಿ ನಿರ್ವಹಿಸುವ ಆಟೋ ಚಾಲಕರು, ಶಾಲಾ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಕಾರ್ಮಿಕರು, ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ
ಈ ಲೆವೆಲ್ ಕ್ರಾಸ್ ಸಮೀಪ ಸಂಚಾರದಟ್ಟನೆ ಕಡಿಮೆ ಮಾಡಲು ರೈಲ್ವೇ ಇಲಾಖೆ ಅಂಡರ್ ಪಾಸ್ ವ್ಯವಸ್ಥೆಗೊಳಿಸಿದೆ ಆದರೆ ಅಂಡರ್ ಪಾಸ್ ಪಾಸ್ ಆದ ನಂತರ ಅಮೆಮ್ಮಾರ್ ಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಯೋಗ್ಯವಾಗಿಲ್ಲ ಮಾತ್ರವಲ್ಲ ಲೆವೆಲ್ ಕ್ರಾಸ್ ಸಮೀಪ ಕೂಡಾ ರಸ್ತೆ ಹದಗೆಟ್ಟು ನಾಗರಿಕ ಸಂಚಾರಕ್ಕೆ ತುಂಬಾ ತೊಡಕಾಗುತ್ತಿದೆ.
ರೈಲ್ವೇ ಇಲಾಖಾ ಅಧಿಕಾರಿಗಳು 173/200, ಎಲ್.ಟಿ 134 ನಂಬರಿನ ರೈಲ್ವೇ ಗೇಟ್ ನಲ್ಲಿ ಆಗುವ ಸಮಸ್ಯೆಗಳ ಬಗ್ಗೆ ತಕ್ಷಣ ಬಗೆಹರಿಸುವಂತೆ ನಾಗರಿಕರ ಅಭಿಪ್ರಾಯವಾಗಿದೆ.
ಈ ಭಾಗದ 173/200, ಎಲ್.ಟಿ 134 ರೈಲ್ವೇ ಗೇಟ್ ಅಭಿವೃದ್ಧಿಗೊಳಿಸುವುದಕ್ಕಾಗಿ ಮೇಲಧಿಕಾರಿಗೆ ಪ್ರಸ್ತಾವನೆ ಕಳಿಸಲಾಗಿದೆ. 19 ಕಿಮೀ ಅಂತರದಲ್ಲಿ ಜನ ಸಂಚಾರ ಇರುವ 3 ಗೇಟ್ ಹಾದು ಹೋಗುವಾಗ ನಾಗರಿಕ ಸಮಾಜದ ಸುರಕ್ಷತೆಗಾಗಿ ರೈಲು ನಿಗದಿತ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸುತ್ತದೆ ಈ ಕಾರಣದಿಂದ ರೈಲು ಗೇಟ್ ತೆರೆಯುವಾಗ ಹೆಚ್ಚಿನ ಸಮಯ ವ್ಯಯವಾಗುತ್ತದೆ ಸಾರ್ವಜನಿಕರು ಗೇಟ್ ಕೀಪರ್ ಜೊತೆ ತಗಾದೆ ತೆಗೆಯದೆ ಕಾನೂನು ಭದ್ದವಾಗಿ ವರ್ತಿಸಬೇಕಾಗಿದೆ ಶೀಘ್ರದಲ್ಲಿ ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಮೇಲಧಿಕಾರಿಗೆ ತಿಳಿಸುತ್ತೇನೆ
- ಸತ್ಯನಾರಾಯಣ
ರೈಲ್ವೇ ವಿಭಾಗದ ಹಿರಿಯ ಇಂಜಿನಿಯರ್
ಕ್ಷೇತ್ರ ಶಾಸಕರೂ ಮಾನ್ಯ ಸ್ಪೀಕರ್ ರವರಾದ ಯುಟಿ ಖಾದರ್ ಅವರ ಗಮನಕ್ಕೆ ಇಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಲಾಗಿದ್ದು ಫರಂಗಿಪೇಟೆಯಿಂದ ದೇವಸ್ಥಾನ ದಾರಿಯಾಗಿ ಅಮೆಮ್ಮಾರ್ ಅಂಡರ್ ಪಾಸ್ ಮುಖಾಂತರ ಸಮರ್ಪಕವಾಗಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಈ ರಸ್ತೆ ಅಭಿವೃದ್ಧಿಯಾದರೆ ಎಲ್ಲಾ ಸಮಸ್ಯೆಗೂ ಮುಕ್ತಿ ದೊರೆಯಲಿದೆ.
ಬಶೀರ್ ತಂಡೇಲ್
ಮಾಜಿ ಪಂಚಾಯತ್ ಸದಸ್ಯ, ಪುದು
ರೈಲ್ವೇ ಗೇಟ್ ಹಾಕಿ ತೆರೆಯುವ ಸಮಯ ಸುದೀರ್ಘವಾಗಿ ಇಲ್ಲಿನ ಜನಸಾಮಾನ್ಯರಿಗೆ ವಿವಿಧ ರೀತಿಯಲ್ಲಿ ಸಂಚಾರಕ್ಕೆ ತೊಡಕಾಗುತ್ತಿದೆ, ರೈಲ್ವೇ ಇಲಾಖೆ ಈ ಭಾಗದಲ್ಲಿ ಅಂಡರ್ ಪಾಸ್ ವ್ಯವಸ್ಥೆಗೊಳಿಸಿದ್ದು ಇದು ಕೂಡಾ ಸಂಚಾರಕ್ಕೆ ಸಮರ್ಪಕವಾಗಿಲ್ಲ ಈ ಎಲ್ಲಾ ಅವ್ಯವಸ್ಥೆಗಳನ್ನು ರೈಲ್ವೇ ಇಲಾಖೆ ಪರಿಶೀಲನೆ ನಡೆಸಿ ನಾಗರಿಕ ಸಮಾಜಕ್ಕೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆಗೊಳಿಸಬೇಕಾಗಿದೆ
- ಮುಹಮ್ಮದ್ ಶಾಫಿ ಲೀಡರ್
ಪುದು ಗ್ರಾಮ ಪಂಚಾಯತ್ ಸದಸ್ಯ