ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಯರಿಗೆ ಕನಿಷ್ಟ ವೇತನ ಆಗ್ರಹಿಸಿ ಜ.28ರಂದು ಬೆಂಗಳೂರು ಚಲೋ
ದ.ಕ. ಜಿಲ್ಲೆಯಿಂದಲೂ ಭಾಗಿ
ಮಂಗಳೂರು, ಜ.22: ಐಸಿಡಿಎಸ್ ಯೋಜನೆ ಆರಂಭವಾಗಿ 50 ವರ್ಷ ಆಗಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಟ ವೇತನ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸಂಘವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಯೋಜಿಸಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸುವುದಾಗಿ ದ.ಕ. ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ತಿಳಿಸಿದೆ.
ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ತಾರಾ ಬಳ್ಳಾಲ್, ಜಿಲ್ಲೆಯಲ್ಲಿ 3500ಕ್ಕೂ ಅಧಿಕ ಮಂದಿ ತಮ್ಮ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು, ಅವರೆಲ್ಲರೂ ತಮ್ಮ ಕರ್ತವ್ಯದಿಂದ ದೂರವಿದ್ದು ಧರಣಿಯಲ್ಲಿ ಭಾಗವಹಿಸುವುದಾಗಿ ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ 25000 ರೂ. ಹಾಗೂ ಸಹಾಯಕಿಯರಿಗೆ 12000 ರೂ. ಕನಿಷ್ಟ ವೇತನ ನಿಗದಿಪಡಿಸಬೇಕು. ಪ್ರಸಕ್ತ ಕಾರ್ಯರ್ತೆಯರಿಗೆ 11000 ಹಾಗೂ ಸಹಾಯಕಿಯರಿಗೆ 6000 ವೇತನ ನೀಡಲಾಗುತ್ತಿದೆ. ಕಾರ್ಯಕರ್ತೆಯರನ್ನು ಸಿ ಹಾಗೂ ಸಹಾಯಕಿಯರನ್ನು ಡಿ ದರ್ಜೆ ಸರಕಾರಿ ನೌಕರರೆಂದು ಪರಿಗಣಿಸಿ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶ ಪ್ರಕಾರ ಕರ್ನಾಟಕದಲ್ಲಿಯೂ ಜಾರಿ ಮಾಡಿ ಸರಕಾರಿ ನೌಕರರಾಗಿ ಪರಿಗಣಿಸಬೇಕು ಎಂಬ ಮುಖ್ಯ ಬೇಡಿಕೆಗಳೊಂದಿಗೆ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದರು.
ಗೋಷ್ಟಿಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಆಶಾಲತ ಎಂ.ವಿ., ಉಪಾಧ್ಯಕ್ಷೆ ರಾಜೀವಿ, ರಾಜ್ಯ ಕೋಶಾಧಿಕಾರಿ ವಿಶಾಲಾಕ್ಷಿ, ರಾಜ್ಯ ಪ್ರತಿನಿಧಿ ಚಂದ್ರಾವತಿ, ಬಂಟ್ವಾಳ ಅಧ್ಯಕ್ಷೆ ವಿಜಯವಾಣಿ, ಮಂಗಳೂರು ಗ್ರಾಮಾಂತರ ಅಧ್ಯಕ್ಷೆ ಶಕಿಲಾ ಉಪಸ್ಥಿತರಿದ್ದರು.