ಅಥರ್ವ ಆಸ್ಪತ್ರೆಯ ಅವಾಂತರ ಪ್ರಕರಣ: ತನಿಖಾ ಸಮಿತಿಯಿಂದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ
ನಾಳೆ (ಫೆ.29) ಸರಕಾರಕ್ಕೆ ಸಲ್ಲಿಕೆ: ಡಿಎಚ್ಒ
ಮೊಯ್ದಿನ್ ಫರ್ಹಾನ್
ಸುರತ್ಕಲ್: ಕಾಲಿಗೆ ಆಗಿದ್ದ ಸಣ್ಣ ಗಾಯದ ಚಿಕಿತ್ಸೆಗೆಂದು ಸುರತ್ಕಲ್ ಅಥರ್ವ ಆರ್ಥೋ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಕುಳಾಯಿ ನಿವಾಸಿ ಮೊಯ್ದಿನ್ ಫರ್ಹಾನ್ ಸಾವಿನ ಕುರಿತ ತನಿಖೆಗೆ ನಿಯೋಜಿಸಿದ್ದ ತನಿಖಾ ಸಮಿತಿಯು ಅಂತಿಮ ವರದಿಯನ್ನು ಬುಧವಾರ ದ.ಕ. ಜಿಲ್ಲಾಧಿಕಾರಿಗೆ ಸಲ್ಲಿಸಿದೆ ಎಂದು ತನಿಖಾ ಸಮಿತಿ ಅಧ್ಯಕ್ಷರಾಗಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ತಿಳಿಸಿದ್ದಾರೆ.
ಈ ವರದಿಯನ್ನು ಗುರುವಾರ ಪೊಲೀಸ್ ಇಲಾಖೆ ಮತ್ತು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
ಫರ್ಹಾನ್ ಮೃತ್ಯು ಪ್ರಕರಣಕ್ಕೆ ಸಂಬಂಧಿಸಿ ನಿಯೋಜಿತ 8 ಮಂದಿ ತಜ್ಞ ವೈದ್ಯರನ್ನೊಳಗೊಂಡ ತನಿಖಾ ಸಮಿತಿಯು ವರದಿಯನ್ನು ಅಂತಿಮಗೊಳಿಸಿದ್ದು,ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ವರದಿಯನ್ನು ಸಲ್ಲಿಸಲಾಗಿದೆ. ಉಳಿದಂತೆ ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಗುರುವಾರ ಹಸ್ತಾಂತರಿಸಲಾಗುವುದು ಎಂದು ತಖಾ ಸಮಿತಿ ಅಧ್ಯಕ್ಷರಾಗಿರುವ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಪ್ರತಿಕ್ರಿಯೆ ನೀಡಿರುವ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಮಾಯಕ ಬಾಲಕನ ಸಾವಿನ ಕುರಿತ ವರದಿ ಬರುವಲ್ಲಿ ಈಗಾಗಲೇ ವಿಳಂಬವಾಗಿದೆ. ಇನ್ನಾದರೂ ತನಿಖೆ ಶೀಘ್ರಗತಿಯಲ್ಲಿ ಮುಂದುವರಿದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವಂತಾಗಲಿ ಎಂದು ಒತ್ತಾಯಿಸಿದ್ದಾರೆ.
ವರದಿಯಲ್ಲಿ ಬಾಲಕನ ಕುಟುಂಬಕ್ಕೆ ಅನ್ಯಾಯವಾಗಿರುವುದು ಕಂಡುಬಂದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂತ್ರಸ್ತ ಕುಟುಂಬದ ಪರ ಹೋರಾಟದ ಮುಂಚೂಣಿಯಲ್ಲಿರುವ ಮುನೀರ್ ತಿಳಿಸಿದ್ದಾರೆ.