ಬಂಟ್ವಾಳ| ಯುವಕನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ, ದಂಡ
ಪಾಪಪ್ರಜ್ಞೆ ಕಾಡಿ ತಾನೇ ದೂರು ನೀಡಿದ್ದ ಆರೋಪಿ

ಮಂಗಳೂರು, ಜ.18: ಬಂಟ್ವಾಳ ತಾಲೂಕಿನ ತೆಂಕಕಜೆಕಾರಿನ ಕೆಳಗಿನ ಕಾರ್ಲ ಎಂಬಲ್ಲಿ ವೈಯಕ್ತಿಕ ದ್ವೇಷದಿಂದ ಮುಹಮ್ಮದ್ ರಫೀಕ್ (20) ಎಂಬಾತನನ್ನು ಕೊಲೆಗೈದ ಆರೋಪಿ ತೆಂಕಕಜೆಕಾರು ನಿವಾಸಿ ಸಿದ್ದೀಕ್ (34) ಎಂಬಾತನಿಗೆ ಮಂಗಳೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 1.50 ಲಕ್ಷ ರೂ. ದಂಡ ವಿಧಿಸಿ ಶನಿವಾರ ತೀರ್ಪು ನೀಡಿದೆ.
2021ರ ಸೆ. 12ರಂದು ಸಂಜೆ ಆರೋಪಿಯು ರಫೀಕ್‌ನನ್ನು ಸಿಗರೇಟ್ ಸೇದುವ ನೆಪದಲ್ಲಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಬಳಿಕ ತನ್ನ ಮನೆಗೆ ಹೋಗಿ ರಕ್ತಸಿಕ್ತ ಬಟ್ಟೆಯನ್ನು ಬದಲಾಯಿಸಿದ್ದ. ಅಲ್ಲದೆ ಕೊಲೆಯಾದ ರಫೀಕ್‌ನ ಮನೆಗೆ ತೆರಳಿ ಆತನ ತಾಯಿಯ ಬಳಿ ಕೇಳಿ ಆರೋಪಿಯು ಊಟ ಕೂಡ ಮಾಡಿದ್ದ. ಆವಾಗ ತನ್ನ ಪುತ್ರನ ಬಗ್ಗೆ ತಾಯಿ ಬೀಫಾತುಮ್ಮ ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದ. ನಂತರ ಸ್ನೇಹಿತ ಫಯಾಝುದ್ದೀನ್‌ನಲ್ಲಿ ಸುಳ್ಳು ಹೇಳಿ ಆತನ ಕಾರಿನಲ್ಲಿ ರಫೀಕ್‌ನ ಮೃತದೇಹವನ್ನು ದೇವಸ್ಯ ಮೂಡೂರಿನ ನೀರೊಲ್ಬೆಯ ಮೋರಿಯ ಕೆಳಗೆ ಬಿಸಾಡಿ ಮನೆಗೆ ಬಂದಿದ್ದ ಎಂಬುದಾಗಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಇನ್‌ಸ್ಪೆಕ್ಟರ್ ಶಿವಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಭಿಯೋಜನೆ ಪರ 19 ಸಾಕ್ಷಿಗಳನ್ನು ವಿಚಾರಿ ಸಲಾಗಿತ್ತು. 57 ದಾಖಲೆ, 14 ವಸ್ತುಗಳನ್ನು ಗುರುತಿಸಲಾಗಿತ್ತು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶ ಕಾಂತರಾಜು ಎಸ್.ವಿ. ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 302ರ ಪ್ರಕಾರ ಜೀವಾವಧಿ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 201ರಂತೆ 7 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೃತನ ತಾಯಿಗೆ ಪರಿಹಾರ ನೀಡುವಂತೆಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಸರಕಾರದ ಪರವಾಗಿ ಅಭಿಯೋಜಕರಾದ ಜ್ಯೋತಿ ಪಿ.ನಾಯ್ಕ ಮತ್ತು ಬಿ.ಶೇಖರ ಶೆಟ್ಟಿ ಹಾಗೂ ಚೌಧರಿ ಮೋತಿಲಾಲ್ ವಾದ ಮಂಡಿಸಿದ್ದರು.
ಪಾಪಪ್ರಜ್ಞೆ ಕಾಡಿ ತಾನೇ ದೂರು ನೀಡಿದ್ದ ಆರೋಪಿ!
ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿದ್ದ ಆರೋಪಿಯು ರಾತ್ರಿ ಇಡೀ ಪಾಪಪ್ರಜ್ಞೆ ಕಾಡಿ ನಿದ್ರೆ ಬಾರದೆ ಚಟಪಡಿಸಿದ್ದ ಎನ್ನಲಾಗಿದೆ. ಮರುದಿನ ಬೆಳಗ್ಗೆ ತಾನೇ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿದ್ದಾಗಿ ಮಾಹಿತಿ ನೀಡಿದ್ದ. ಆರೋಪಿ ಮತ್ತು ಕೊಲೆಗೀಡಾದ ವ್ಯಕ್ತಿ ಒಟ್ಟಿಗೆ ಹೊರಗೆ ತೆರಳಿರುವುದನ್ನು ಮೃತನ ತಾಯಿ ನೋಡಿದ್ದು, ಅದನ್ನೇ ಸಾಂದರ್ಭಿಕ ಸಾಕ್ಷಿ ಎಂದು ಬಳಸಿಕೊಳ್ಳಲಾಗಿದೆ.