ಬಂಟ್ವಾಳ: ಕಾರಿಗೆ ಜಲ್ಲಿ ಸಾಗಾಟದ ಟಿಪ್ಪರ್ ಢಿಕ್ಕಿ
ಬಂಟ್ವಾಳ, ನ.9: ಕಾರೊಂದಕ್ಕೆ ಜಲ್ಲಿ ಸಾಗಾಟದ ಟಿಪ್ಪರ್ ವೊಂದು ಢಿಕ್ಕಿ ಹೊಡೆದ ಕಾರು ಜಖಂಗೊಂಡ ಘಟನೆ ಬಂಟ್ವಾಳ ಸಮೀಪದ ಲೊರೆಟ್ಟೋ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ.
ಮೈಸೂರು ಮೂಲದ ಕೃಷ್ಣ ಅರಸ ಎಂಬವರ ಕಾರಿಗೆ ಕೆ.ಎನ್.ಆರ್.ಸಿ. ಕಂಪೆನಿಗೆ ಸೇರಿರುವ ಟಿಪ್ಪರ್ ಢಿಕ್ಕಿಯಾಗಿದೆ.
ಕೃಷ್ಣ ಅರಸರ ಮಗಳು ಮೂಡುಬಿದಿರೆಯ ಅಳ್ವಾಸ್ ಕಾಲೇಜಿನಲ್ಲಿ ಕಲಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಅವರು ಮೂಡುಬಿದಿರೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕೆ.ಎನ್.ಆರ್.ಸಿ.ಕಂಪೆನಿಗೆ ಸೇರಿದ ಟಿಪ್ಪರ್ ಅತೀ ವೇಗದಿಂದ ಬಂದು ಎದುರಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರು ಚಾಲಕ ಕೃಷ್ಣ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಸ್ಥಳದಲ್ಲಿ ಹಠಾತ್ ಪ್ರತಿಭಟನೆ:
ಅಪಘಾತದ ಬೆನ್ನಲ್ಲೇ ಸೇರಿದ ಸಾರ್ವಜನಿಕರು ಕಂಪೆನಿಯ ಘನಗಾತ್ರದ ವಾಹನಗಳ ಸಂಚಾರದಿಂದ ಪ್ರಾಣಹಾನಿಯ ಜೊತೆಗೆ ಉತ್ತಮವಾಗಿದ್ದ ಡಾಮರು ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕೆ.ಎನ್.ಆರ್.ಸಿ.ಕಂಪೆನಿಯ ಲಾರಿಗಳನ್ನು ತಡೆದು ಹಠಾತ್ ಪ್ರತಿಭಟನೆ ನಡೆಸಿದರು.
ಬಿ.ಸಿ.ರೋಡಿನಿಂದ ಅಡ್ಡಹೊಳೆ ವರೆಗೆ ರಾಷ್ಟ್ರೀಯ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್.ಸಿ. ಕಂಪೆನಿ ಕಾಮಗಾರಿ ನಡೆಸಲು ಜಲ್ಲಿಯನ್ನು ಕುಪ್ಪೆಪದವು ಎಂಬಲ್ಲಿರುವ ಜಲ್ಲಿ ಪ್ಲ್ಯಾಂಟ್ ನಿಂದ ಬೃಹತ್ ಗಾತ್ರದ ಟಿಪ್ಪರ್ ಗಳ ಮೂಲಕ ತರುತ್ತಿದ್ದಾರೆ. ಈ ವಾಹನಗಳ ಚಾಲಕರು ಅತೀ ವೇಗ ಮತ್ತು ಅಜಾಗರೂಕತೆಯ ವಾಹನ ಚಾಲನೆ ಮಾಡುವುದರಿಂದ ಕಳೆದ ಎರಡು ವರ್ಷಗಳಲ್ಲಿ ಅನೇಕ ಅಪಘಾತಗಳಿಗೆ ಕಾರಣರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಂಪೆನಿಯ ವಿರುದ್ಧ ಪ್ರಕರಣ ದಾಖಲಿಸಿ ಮತ್ತು ಕಂಪೆನಿಗೆ ಸೇರಿರುವ ಲಾರಿಗಳಿಗೆ ಸ್ಪೀಡ್ ಕಂಟ್ರೋಲ್ ಕಿಟ್ ಹಾಕಿ ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಟ್ರಾಫಿಕ್ ಎಸ್ಸೈ ಸುತೇಶ್, ಮತ್ತು ಸಂಜೀವ ಹಾಗೂ ಎಎಸ್ಸೈ ಸುರೇಶ್ ಪಡಾರ್, ಸಿಬ್ಬಂದಿ ರಾಜು, ವಿವೇಕ್, ಸಂತೋಷ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.