ಬಂಟ್ವಾಳ: ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಮೇಲಿನ ಹಲ್ಲೆ ಖಂಡನೀಯ: ಸನತ್ ಕುಮಾರ್ ಆರೋಪ
ಬಂಟ್ವಾಳ: ಅನಂತಾಡಿ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಅವರ ಮೇಲೆ ನಡೆದ ಹಲ್ಲೆಖಂಡನೀಯ. ಇದೊಂದು ರಾಜಕೀಯ ಪ್ರೇರಿತ ಕೃತ್ಯವಾಗಿದ್ದು, ವಿಕೃತಿ ಮನಸ್ಸು ಹೊಂದಿರುವ ಕಾಂಗ್ರೆಸಿಗರ ಕೆಲಸದಿಂದ ನಾಗರೀಕರು ತಲೆತಗ್ಗಿಸುವಂತೆ ಮಾಡಿದೆ ಎಂದು ಅನಂತಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸನತ್ ಕುಮಾರ್ ಆರೋಪಿಸಿದರು.
ಶಾಸಕ ರಾಜೇಶ್ ನಾಯ್ಕ್ ಅವರ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿಯನ್ನು ಸಹಿಸಲಾರದೆ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮುಂದುವರಿದರೆ ರಸ್ತೆಗಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಲ್ಲೆಗೊಳಗಾದ ಗ್ರಾ.ಪಂ.ಅಧ್ಯಕ್ಷ ಗಣೇಶ್ ಪೂಜಾರಿ ಮಾತನಾಡಿ, ಅನಂತಾಡಿ ಗ್ರಾ.ಪಂ.ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಲು ಸಾಧ್ತವಾಗದ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಗೂಂಡಗಿರಿ ಮಿತಿಮೀರಿದ್ದು, ಗ್ರಾಮಸ್ಥರಿಗೆ ಭದ್ರತೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅರೋಪ ಮಾಡಿದರು.
ಅನಂತಾಡಿ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ಚರಂಡಿಗಳಲ್ಲಿ ನೀರು ಸರಿಯಾಗಿ ಹರಿದು ಹೋಗದೆ ಸಾಂಕ್ರಮಿಕ ರೋಗಗಳು ಉಂಟಾಗುತ್ತದೆ ಎಂಬ ಹಿನ್ನಲೆಯಲ್ಲಿ ಚರಂಡಿ ಹೂಳೆತ್ತುವ ಬಗ್ಗೆ ಒತ್ತಾಯ ಕೇಳಿ ಬಂದಿತ್ತು. ಈ ಕಾರಣಕ್ಕಾಗಿ ಅಧ್ಯಕ್ಷನ ಜವಬ್ದಾರಿ ಹೊತ್ತು ಅನಂತಾಡಿ ಗ್ರಾ.ಪಂ.ನ ವ್ಯಾಪ್ತಿಯ ಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯ ಮಾಡುತ್ತಿದ್ದೆ. ಇದರ ಜೊತೆಗೆ ಅನಂತಾಡಿಯ ಬೇಬಿ ಮತ್ತು ಕುಸುಮ ಅವರ ಅಂಗಲಕ್ಕೆ ಮತ್ತು ಕೃಷಿಗೆ ನೀರು ಹೋಗಿ ತೊಂದರೆಯಾಗುತ್ತಿದೆ ಎಂದು ಗ್ರಾಮಸಭೆಯಲ್ಲಿ ದೂರು ಬಂದಿದ್ದು ಚರಂಡಿಯ ಹೂಳೆತ್ತುವ ಕಾರ್ಯಕ್ಕಾಗಿ ಮುಂದಾಗಿದ್ದವು. ಅ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸತೀಸ್ ಪೂಜಾರಿ, ಅತನ ಸಂಬಂಧಿಕ ಸುಕೇಶ್ ಪೂಜಾರಿ ಅವರು ಏಕಾಏಕಿ ಬಂದು ಇದು ನಿಮ್ಮ ಅಪ್ಪನ ಜಾಗವ ಎಂದು ಬೈದು ಹಲ್ಲೆ ನಡೆಸಿದ್ದಲ್ಲದೆ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಸರಕಾರ ಬದಲಾವಣೆ ಆದ ಕೂಡಲೇ ಬಿಟ್ಟಿ ಭಾಗ್ಯದ ಜೊತೆ ಉಚಿತ ಗೂಂಡ ಭಾಗ್ಯವೂ ಜನತೆಗೆ ಸಿಕ್ಕಿದೆ ಎಂದು ಅರೋಪ ಮಾಡಿದರು. ಈ ಘಟನೆಯ ಬಗ್ಗೆ ಸರಕಾರ ಸ್ಪಷ್ಟವಾದ ಉತ್ತರ ನೀಡಬೇಕಾಗಿದೆ.ಜನಪ್ರತಿನಿಧಿಗಳಿಗೆ ಅದರಲ್ಲೂ ಗ್ರಾ.ಪಂ. ಅಧ್ಯನೋರ್ವನಿಗೆ ಹಲ್ಲೆ ನಡೆದರೆ ಯಾವ ರೀತಿಯಲ್ಲಿ ಕೆಲಸ ಮಾಡಬಹುದು ಎಂದು ಪ್ರಶ್ನಿಸಿದ ಅವರು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಸಂಬಂಧಿಸಿದ ಇಂಜಿನಿಯರ್ ಹಾಗೂ ಪೊಲೀಸರ ಭದ್ರತೆಯಲ್ಲಿ ಗ್ರಾಮಸ್ಥರ ಕೆಲಸಗಳನ್ನು ಪಂಚಾಯತ್ ಅಧ್ಯಕ್ಷನ ನೆಲೆಯಲ್ಲಿ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅನಂತಾಡಿ ಗ್ರಾ.ಪಂ.ಉಪಾಧ್ಯಕ್ಷ ಕುಸುಮದಾರ ಗೌಡ, ಬೂತ್ ಅಧ್ಯಕ್ಷ ಮಹಾಬಲ ಪೂಜಾರಿ, ಸಂಚಾಲಕ ನಾಗೇಶ್ ಭಂಡಾರಿ , ಬಿಜೆಪಿ ಕಾರ್ಯಕರ್ತ ಶಶಿಕಾಂತ್ ಶೆಟ್ಟಿ ಬಾಳಿಕೆ ಉಪಸ್ಥಿತರಿದ್ದರು.