ಬಂಟ್ವಾಳ : ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು
ಬಂಟ್ವಾಳ : ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ಮತ್ತು ನಗದು ಕಳ್ಳತನ ಮಾಡಿದ ಘಟನೆ ಬಿ.ಮೂಡ ಗ್ರಾಮದ ಬಿ.ಸಿ. ರೋಡಿನಲ್ಲಿ ರವಿವಾರ ನಡೆದಿದೆ.
ಬಿ.ಸಿ.ರೋಡಿನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ವೀಕ್ಷಿತ್ ಎಂಬವರ ಮನೆಯಿಂದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ನಗದು ಕಳವು ನಡೆದಿದೆ ಎಂದು ದೂರು ನೀಡಿದ್ದಾರೆ.
ಇವರು ಬೆಳಗ್ಗೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಾಗಿಲ ಸಮೀಪ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಸೋಪಾದ ಮೇಲೆ ಕೀ ಬಿದ್ದುಕೊಂಡಿತ್ತು.
ಮನೆಯ ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿ ಇರಿಸಲಾಗಿದ್ದ 67 ಗ್ರಾಂ ತೂಕದ ಚಿನ್ನ ಹಾಗೂ 5 ಸಾವಿರ ರೂ ನಗದನ್ನು ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Next Story