ಬಂಟ್ವಾಳ: ಅಂಬೇಡ್ಕರ್ ಭವನ ಕಾಟಾಚಾರದ ಉದ್ಘಾಟನೆಗೆ ಮುಂದಾಗಿರುವುದು ಖಂಡನೀಯ- ಸತೀಶ್ ಅರಳ
ಬಂಟ್ವಾಳ : ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ತರಾತುರಿಯಾಗಿ, ಗೌಪ್ಯವಾಗಿ ಮತ್ತು ಕಾಟಾಚಾರದ ಉದ್ಘಾಟನೆಗೆ ಮುಂದಾಗಿರುವುದು ಖಂಡನೀಯ ಎಂದು ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸತೀಶ್ ಅರಳ ತಿಳಿಸಿದ್ದಾರೆ.
2017 ರ ಜನವರಿಯಲ್ಲಿ ಶಿಲಾನ್ಯಾಸಗೊಂಡ ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ಇದೇ ತಿಂಗಳ 20 ರಂದು ತರಾತುರಿಯಾಗಿ ಉದ್ಘಾಟನೆಗೆ ಮುಂದಾಗಿರುವುದು ಸರಿಯಲ್ಲ ಎಂದ ಅವರು ಇಡೀ ಜಗತ್ತೇ ಗೌರವಿಸಲ್ಪಡುವ ಭಾರತದ ಭಾಗ್ಯವಿದಾತ, ಸಂವಿಧಾನ ಶಿಲ್ಪಿ, ಭಾರತರತ್ನ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೂತನ ಅಂಬೇಡ್ಕರ್ ಭವನವನ್ನು ಕಾನೂನು ರೀತಿಯಲ್ಲಿ ಗೌರವದಿಂದ ಕ್ರಮಬದ್ಧವಾಗಿ ಶಿಷ್ಟಾಚಾರದಂತೆ ಮತ್ತು ವಿಜೃಂಭಣೆಯಿಂದ ಲೋಕಾರ್ಪಣೆ ಮಾಡಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಭವನ ಉದ್ಘಾಟನೆಗೆ ನಿಗದಿ ಪಡಿಸಿರುವ ಸ. 20 ರ ದಿನಾಂಕವನ್ನು ಮುಂದೂಡುವಂತೆ ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಕುಂದು ಕೊರತೆ ಸಭೆಯಲ್ಲಿ ಬಂಟ್ವಾಳ ತಾಲೂಕು ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘದ ವತಿಯಿಂದ ಲಿಖಿತ ಮನವಿಯನ್ನು ನೀಡಲಾಯಿತು.
ಈ ಸಂದರ್ಭ ದಲಿತ ಮುಖಂಡರಾದ ಶ್ರೀನಿವಾಸ್ ಅರ್ಬಿಗುಡ್ಡೆ, ಸಂತೋಷ್ ಭಂಡಾರಿಬೆಟ್ಟು, ಸರೋಜಾ ಸರಪಾಡಿ, ಉಮೇಶ್ ಕೃಷ್ಣಾಪುರ, ಚಂದ್ರಹಾಸ್ ಅರ್ಬಿಗುಡ್ಡೆ, ಪ್ರೀತಿ ರಾಜ್ ದ್ರಾವಿಡ್, ನಾರಾಯಣ ಬೊಂಡಾಲ, ಸತೀಶ್ ಏರ್ಯ, ರಾಮ ಚೆಂಡ್ತಿಮಾರ್ ಪ್ರೇಮ್ ರಾಜ್ ದ್ರಾವಿಡ್ ಮೊದಲಾದವರು ಉಪಸ್ಥಿತರಿದ್ದರು.