ಬಂಟ್ವಾಳ: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ; ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: ಪೊಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿದಲ್ಲದೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಂಬೆ ನಿವಾಸಿಗಳಾದ ಮನೀಶ್ ಪೂಜಾರಿ ಮತ್ತು ಮಂಜುನಾಥ್ ಆಚಾರ್ಯ ಬಂಧಿತ ಆರೋಪಿಗಳು.
ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿಯ ಪೊಲೀಸ್ ಸಿಬ್ಬಂದಿ ಕುಮಾರ್ ಅವರ ಕುಟುಂಬದ ಮೇಲೆ ಮಾನಭಂಗ ಯತ್ನ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಕುಮಾರ್ ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.27ರಂದು ರಾತ್ರಿ ಪತ್ನಿ ಹಾಗೂ ಪತ್ನಿಯ ಅಕ್ಕನ ಜೊತೆ ಬಿ.ಸಿ.ರೋಡಿನ ಹೊಟೇಲ್ ಒಂದರಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬಾರ್ ಒಂದರ ಮುಂಭಾಗದಲ್ಲಿ ನಿಂತುಕೊಂಡಿದ್ದ ಆರೋಪಿಗಳು ಕುಮಾರ್ ಕುಟುಂಬವನ್ನು ಹಿಂಬಾಲಿಸಿದ್ದಾರೆ ಎನ್ನಲಾಗಿದೆ.
ಕುಮಾರ್ ಪತ್ನಿ ಮತ್ತು ಅಕ್ಕನನ್ನು ಮನೆಗೆ ತಲುಪಿಸಿ ವಾಪಸ್ ಠಾಣೆಗೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿದ ಅವರು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಿಲ್ಲ ಎಂದು ಬೆದರಿಕೆ ಹಾಕಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಮನೆಯಿಂದ ಹೊರಗೆ ಬಂದ ಕುಮಾರ್ ಅವರ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿರುವ ಆರೋಪಿಗಳು ಅವರ ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.