ಬಂಟ್ವಾಳ : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 14ನೇ ಶಾಖೆ ಶುಭಾರಂಭ
ಬಂಟ್ವಾಳ: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 14 ನೇ ಶಾಖೆಯು ಸೋಮವಾರ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸನ್ನಿಧಿ ಬಳಿಯ ಪಾರ್ಕ್ ಸ್ಕ್ವೇರ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಶಾಖೆಯನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ವ್ಯವಹಾರವು ದಾಖಲೆಯ ಆಧಾರದಲ್ಲಿ ನಡೆದರೆ ಸಹಕಾರ ಕ್ಷೇತ್ರ ದಲ್ಲಿ ನಂಬಿಕೆ-ಮನುಷ್ಯ ಸಂಬಂಧದ ಮೂಲಕ ನಡೆಯುತ್ತಿದೆ. ಆದರ್ಶ ಸಹಕಾರ ಸಂಘವು ಹಲವು ವಿಧಗಳಲ್ಲಿ ಸಮಾಜಕ್ಕೆ ನೆರವು ನೀಡಿದ್ದು, ಬಂಟ್ವಾಳದ ಜನತೆಯೂ ಅದಕ್ಕೆ ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಸಹಕಾರಿ ಚಳವಳಿಗೂ ಜಿಲ್ಲೆಯಲ್ಲಿ ಭದ್ರ ಅಡಿಪಾಯ ಸಿಕ್ಕಿದ ಪರಿಣಾಮ ಬಲಿಷ್ಠವಾಗಿ ಬೆಳೆದಿದೆ. ಆದರ್ಶ ಸೊಸೈಟಿಯ ಮೂಲಕ ಜನತೆಗೆ ಆರ್ಥಿಕ ನೆರವಿನ ಜತೆಗೆ ಸಾಕಷ್ಟು ಮಂದಿಗೆ ಉದ್ಯೋಗ ಕಲ್ಪಿಸಿದೆ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಕೆ. ಸೀತಾರಾಮ ರೈ ಸವಣೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು 120 ಕೋ.ರೂ. ಠೇವಣಾತಿ, 100 ಕೋ.ರೂ.ನಷ್ಟು ವಿವಿಧ ರೀತಿಯ ಸಾಲ ವಿತರಿಸಿದ್ದು, ಕಳೆದ ಸಾಲಿನಲ್ಲಿ 1.51 ಕೋ.ರೂ. ಲಾಭಗಳಿಸಿದೆ. ಮಂಗಳೂರಿನಲ್ಲಿ ನಡೆದ ಸಹಕಾರಿ ಸಪ್ತಾಹದಲ್ಲಿ ಸಚಿವರು 15 ಸಂಘಗಳ ಪೈಕಿ ನಮ್ಮ ಸಂಘಕ್ಕೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಶಾಖೆಯಲ್ಲಿ ವೈಯಕ್ತಿಕವಾಗಿ 50 ಲಕ್ಷ ರೂ.ಗಳವರೆಗೆ ಸಾಲ ನೀಡಲು ಅವಕಾಶವಿದ್ದು, ಎಲ್ಲಾ ರೀತಿಯ ಸಾಲ ಸೌಲಭ್ಯ ಸಿಗಲಿದೆ ಎಂದ ಅವರು ಸ್ವಾಗತಿಸಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ ಭದ್ರತಾ ಕೊಠಡಿ ಉದ್ಘಾಟಿಸಿದರು. ಮೊಡಂಕಾಪು ಇನೆಂಟ್ ಜೀಸಸ್ ಚರ್ಚ್ ನ ಧರ್ಮಗುರು ರೆ|ಫಾ| ವಲೇರಿಯನ್ ಡಿಸೋಜ ಕಂಪ್ಯೂಟರ್ ವ್ಯವಸ್ಥೆ ಉದ್ಘಾಟಿಸಿದರು. ಪೊಳಲಿ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಬೂಬಕ್ಕರ್ ಅಮ್ಮುಂಜೆ ಪ್ರಥಮ ಠೇವಣಿಪತ್ರ ಬಿಡುಗಡೆ ಮಾಡಿದರು.
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಜೈರಾಜ್ ಬಿ.ರೈ, ಸಂಘದ ಉಪಾಧ್ಯಕ್ಷ ಎನ್.ಸುಂದರ ರೈ, ಮಹಾಪ್ರಬಂಧಕ ವಸಂತ್ ಜಾಲಾಡಿ ವೇದಿಕೆಯಲ್ಲಿದ್ದರು.
ನಿರ್ದೇಶಕ ಜೈರಾಜ್ ಭಂಡಾರಿ ನೋಣಾಲು ವಂದಿಸಿದರು. ಪರಮೇಶ್ವರ ಗೌಡ ಕಾರ್ಯಕ್ರಮ ನಿರೂಪಿಸಿದರು.