ಬ್ಯಾರೀಸ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ, ಮೋಂಟೆಸ್ಸರಿ ಘಟಿಕೋತ್ಸವ ಸಂಭ್ರಮ

ಮಂಗಳೂರು: ನಗರದ ಲೇಡಿಹಿಲ್‌ನಲ್ಲಿರುವ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಮತ್ತು ಹಿಸ್‌ಗ್ರೇಸ್ ಮೋಂಟೆಸ್ಸರಿಯ ಘಟಿಕೋತ್ಸವ ಸಂಭ್ರಮವು ಶನಿವಾರ ಪುರಭವನದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬ್ಯಾರೀಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಮೋಂಟೆಸ್ಸರಿಯಿಂದ ಇಂಜಿನಿಯರಿಂಗ್ ಪದವಿವರೆಗೆ ಮಕ್ಕಳನ್ನು ರೂಪಿಸುವುದು ಸಣ್ಣ ಸಂಗತಿಯಲ್ಲ. ಅವರ ಬದ್ಧತೆಯೇ ಈ ಶಿಕ್ಷಣ ಸಂಸ್ಥೆಯು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ ಎಂದರು.
ಈ ಶಾಲೆಯ ಮಕ್ಕಳ ಪ್ರತಿಭೆಯನ್ನು ಗಮನಿಸುವಾಗ ತುಂಬಾ ಖುಷಿಯಾಗುತ್ತಿದೆ. ಸಕಾರಾತ್ಮಕ ಚಿಂತನೆಯೊಂದಿಗೆ ಶಿಕ್ಷಣ ಕಲಿತರೆ ಅದರಿಂದ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ. ಹೆಣ್ಮಕ್ಕಳ ಶಿಕ್ಷಣಕ್ಕೆ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಅದನ್ನು ಸದುಪಯೋಗಪಡಿಸಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಇದರ ಸ್ಥಾಪಕ ಹಾಗೂ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ಮಾತನಾಡಿ ಕೇವಲ ಪದವಿ ಗಳಿಕೆ ಅಥವಾ ಉದ್ಯೋಗಕ್ಕಾಗಿ ಶಿಕ್ಷಣ ಕಲಿಯುವುದಲ್ಲ. ಕಲಿತು ತೇರ್ಗಡೆ ಹೊಂದುವ ಗುರಿಯೊಂದಿಗೆ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸಣ್ಣ ಸಣ್ಣ ವಿಚಾರಕ್ಕೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡಬಾರದು. ಹೆತ್ತವರು ತಮ್ಮ ಮಕ್ಕಳನ್ನು ಗದರಿಸದೆ ಪ್ರೀತಿ, ವಿಶ್ವಾಸ, ಗೌರವದಿಂದ ಕಾಣಬೇಕು ಎಂದು ಸಯ್ಯದ್ ಮುಹಮ್ಮದ್ ಬ್ಯಾರಿ ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ರೋಶನಿ ನಿಲಯದ ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಡೀನ್ ಡಾ. ಮೀನಾ ಮೊಂತೆರೋ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಪಿ. ಮಂಜುಳಾ ಭಾಗವಹಿಸಿದ್ದರು.
ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲೆ ಖತೀಜತುಲ್ ಖುಬ್ರಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಕಿನ್ಝ್ ಸ್ವಾಗತಿಸಿದರು. ಕೆ.ಎಂ. ಗುಲ್ಫಾಮ್ ಮತ್ತು ಅಬ್ಬು ಅನಿಖ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಸಫಿಯಾ ಶಝ್ನೀನ್ ಮತ್ತು ಶೆಹ್ಝಾ ಝುಬೇದಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು. ಮುಹಮ್ಮದ್ ಝಯಾನ್ ವಂದಿಸಿದರು. ಉಪಪ್ರಾಂಶುಪಾಲೆ ಕಸ್ಟಿನ್ ಖಾನ್ ಸಹಕರಿಸಿದರು.