ಬೆಳಪು ಸಹಕಾರಿ ಸಂಘ ಶೇ.12 ಡಿವಿಡೆಂಡ್ ಘೋಷಣೆ
ಉಚ್ಚಿಲ: ಬೆಳಪು ವ್ಯವಸಾಯ ಸಹಕಾರಿ ಸಂಘವು 2012-13 ನೇ ಸಾಲಿನಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದ್ದು, ಸಂಘವು ಈ ವರ್ಷ 5.72 ಕೋಟಿ ಸರ್ವಕಾಲಿಕ ಲಾಭ ಗಳಿಸಿದ್ದು ವಾರ್ಷಿಕ ನಿವ್ವಳ ಲಾಭ 51 ಲಕ್ಷವಾಗಿರುತ್ತದೆ ಸದಸ್ಯರಿಗೆ 12% ಡಿವಿಡೆಂಡ್ ನೀಡುವುದಾಗಿ ಎಂದು ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಘೋಷಿಸಿದರು.
ಶನಿವಾರ ಉಚ್ಚಿಲ ಸಹಕಾರಿ ಮಹಲ್ ಸಭಾಂಗಣದಲ್ಲಿ ನಡೆದ ಬೆಳಪು ವ್ಯವಸಾಯ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ವಾರ್ಷಿಕ ವ್ಯವಹಾರ 300 ಕೋಟಿ ದಾಟಿದೆ. ಮುಂದಿನ ವರ್ಷ 400 ಕೋಟಿ ರೂ. ವ್ಯವಹಾರ ನಡೆಸುವ ಗುರಿ ಹೊಂದಿದೆ ಎಂದರು.
ಸಂಘಕ್ಕೆ ಉಚ್ಚಿಲ ಶಾಖೆಯಲ್ಲಿ ನಬಾರ್ಡ್ ಯೋಜನೆಯಡಿ 3.70 ಕೋಟಿ ವೆಚ್ಚದಲ್ಲಿ ಸಹಕಾರಿ ಮಹಲ್ ಸ್ಥಾಪನೆಗೆ ಮಂಜೂ ರಾತಿ ದೊರಕಿದ್ದು, ಈ ಮಹಲ್‍ನಲ್ಲಿ ಶಾಪಿಂಗ್ ಮಹಲ್, ಸಹಕಾರಿ ಸಭಾಂಗಣ, ರೈತರ ದಾಸ್ತಾನು ಕೊಠಡಿ ಮತ್ತು ವಿವಿಧ ರೈತ ಸಲಕರಣೆಗಳ ಮಾರಾಟ ಮಳಿಗೆ ಹಾಗೂ ಗೃಹೋಪಯೋಗಿ ವಸ್ತುಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರಾಥಮಿಕ ಸಹಕಾರಿ ಕ್ಷೇತ್ರದಲ್ಲಿ ದಾಖಲೆಯ ಸಾಧನೆಗೆ ಪಾತ್ರವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಜನೌಷಧಾಲಯ ಮತ್ತು ಕೃಷಿ ರಾಸಾಯನಿಕ ಔಷಧಿ ಕೇಂದ್ರವನ್ನು ಸಾರ್ವಜನಿಕರಿಗೆ ಸೇವಾ ಮನೋ ಭಾವನೆಯೊಂದಿಗೆ ಪ್ರಾರಂಭಿಸಲಾಗುವುದು ಎಂದರು. ಪಣಿಯೂರಿನ ಪ್ರಧಾನ ಕಛೇರಿಯನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ ಹಾಗೂ ಗ್ರಾಹಕರ ಬೇಡಿಕೆಯಂತೆ ದೊಡ್ಡ ಗಾತ್ರದ ಸೇಫ್ ಲಾಕರ್ ಅಳವಡಿಸಲಾಗಿದೆ. ಉಚ್ಚಿಲ ಶಾಖೆಯಲ್ಲಿ ಗ್ರಾಹಕರ ಸೇಫ್ ಲಾಕರ್ ಅಳವಡಿಸಲಾಗಿದೆ ಎಂದರು.
ವಿದ್ಯಾರ್ಥಿ ವೇತನ, ಧನಸಹಾಯ: ಸಂಘದ ವ್ಯವಹಾರ ಕ್ಷೇತ್ರ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಖೆಯ ಏಳು ಮತ್ತು ಹತ್ತನೆಯ ತರಗತಿಯಲ್ಲಿ ಗರಿಷ್ಠ ಅಂಕ ಪಡೆದ ಪ್ರಥಮ ಹಾಗೂ ದ್ವಿತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು, ನವೋದಯ ಗುಂಪಿನ ಸದಸ್ಯರ ಮಕ್ಕಳಿಗೆ ಶಾಲೆಯಲ್ಲಿ ಗರಿಷ್ಠ ಅಂಕ ಪಡೆದವರಿಗೆ ವಿದ್ಯಾರ್ಥಿವೇತನವನ್ನು ಹಾಗೂ ನಮ್ಮ ಸಂಘದ ಸದಸ್ಯರ ಮಕ್ಕಳು 10 ನೇ ಮತ್ತು ಪಿಯುಸಿ ಯಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ಹಾಗು ಅನಾರೋಗ್ಯ ಪೀಡಿತರಿಗೆ ಆರ್ಥಿಕ ಧನಸಹಾಯ ವಿತರಿಸಲಾಯಿತು.
ಸಂಘದ ನಿರ್ದೇಶಕರಾದ ಪಾಂಡು ಶೆಟ್ಟಿ,ಪಾಂಡು ಶೇರಿಗಾರ,ಗೋಪಾಲ ಪೂಜಾರಿ,ಆಲಿಯಬ್ಬ,ಸೈಮನ್ ಡಿ'ಸೋಜ, ಮೀನ ಪೂಜಾರ್ತಿ,ಅನಿತ,ವಿಮಲ ಅಂಚನ್, ಬಾಲಕೃಷ್ಣ ಎಸ್. ಆಚಾರ್ಯ, ಶೋಭ ಬಿ. ಭಟ್,ದ್ಯುಮಣಿ ಆರ್ ಭಟ್,ಹಾಗು ದ.ಕ. ಜಿಲ್ಲಾ ಕೇಂದ್ರ ಬ್ಯಾಂಕಿನ ಪ್ರತಿನಿಧಿಗಳಾದ ಬಾಲಕೃಷ್ಣ ಭಟ್ ಉಪಸ್ಥಿತಿತರಿದ್ದರು. ಸಂಘದ ಆಡಳಿತ ಮಂಡಳಿ ನಿರ್ದೆಶಕ ಬಾಲಕೃಷ್ಣ ಎಸ್.ಆಚಾರ್ಯ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಲೋಚನ ವಾರ್ಷಕ ವರದಿ ಮಂಡಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.