ಬೆಳ್ತಂಗಡಿ: ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೆ.3ರಂದು ಪ್ರತಿಭಟನೆ: ಮಹೇಶ್ ಶೆಟ್ಟಿ ತಿಮರೋಡಿ
ಬೆಳ್ತಂಗಡಿ: ಸೌಜನ್ಯ ಪ್ರಕರಣದಲ್ಲಿ ಮರುತನಿಖೆಗೆ ಒತ್ತಾಯಿಸಿ ಪ್ರಜಾಪ್ರಭುತ್ವ ವೇದಿಕೆ ನೇತೃತ್ವದಲ್ಲಿ ಸೆ 3ರಂದು ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಜಾಪ್ರಭುತ್ವ ವೇದಿಕೆಯ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 11ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಸಂತೋಷ್ ರಾವ್ ಆರೋಪಿ ಅಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಆದರೆ ಆರೋಪಿ ಯಾರು ಎಂದು ತಿಳಿಯಲೇ ಬೇಕಾಗಿದೆ. ಅದಕ್ಕಾಗಿ ಸರಕಾರಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ ಆದರೆ ಏನೂ ಪ್ರಯೋಜನವಾಗಿಲ್ಲ ಎಂದರು.
ಸಿಬಿಐ ತನಿಖೆಯೂ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ ತಿಮರೋಡಿ, ಪ್ರಕರಣದ ತನಿಖೆಯ ಆರಂಭದಲ್ಲಿಯೇ ಸಾಕ್ಷ್ಯಗಳನ್ನು ನಾಶಮಾಡಲಾಗಿದೆ ಎಂದು ನ್ಯಾಯಾಲಯವೇ ಹೇಳಿದೆ. ಹೀಗಿರುವಾಗ ಪ್ರಕರಣದ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿಯೇ ಮರು ತನಿಖೆ ನಡೆಸಬೇಕು. ಸಾಕ್ಷಿ ನಾಶ ಮಾಡಿದವರ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ ಎಂದು ಒತ್ತಾಯಿಸಿದರು.
ಸೆ.3ರಂದು ನ್ಯಾಯಕ್ಕಾಗಿ ಬೆಳ್ತಂಗಡಿ ಯಲ್ಲಿ ಬೃಹತ್ ಹೋರಾಟ ನಡೆಯಲಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಯಾರನ್ನೂ ವಾಹನ ಮಾಡಿ ಕರೆತರುವ ಅಥವಾ ಆಮಿಷವೊಡ್ಡಿ ಒತ್ತಾಯ ಪೂರ್ವಕವಾಗಿ ಕರೆತರುವ ವಿಚಾರವೇ ಇಲ್ಲ ಜನರು ಸ್ವ ಇಚ್ಚೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಯಲಿದ್ದು ಪ್ರತಿಭಟನೆಯ ದಿನ ಒತ್ತಾಯಪೂರ್ವಕ ಬಂದ್ ಅಥವಾ ಅಂಗಡಿಗಳನ್ನು ಮುಚ್ಚುವಂತೆ ಕೇಳಿಕೊಳ್ಳಲಾಗುವುದಿಲ್ಲ. ಆಸಕ್ತರು ಸ್ವ ಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ಹೋರಾಟಕ್ಕೆ ಬೆಂಬಲ ನೀಡಬಹುದಾಗಿದೆ ಎಂದರು.
ಮರು ತನಿಖೆ ನಡೆಯಬೇಕು. ಆರೋಪಿಗಳು ಯಾರು ಎಂಬುದು ಪತ್ತೆಯಾಗಬೇಕು ಹಾಗೂ ತನಿಖೆಯ ದಿಕ್ಕು ತಪ್ಪಿಸಿ ಆರೋಪಿಗಳನ್ನು ರಕ್ಷಿಸಿದವರು ಯಾರು ಎಂಬುದು ಸಮಾಜಕ್ಕೆ ಗೊತ್ತಾಗಬೇಕಾಗಿದೆ. ಅದಕ್ಕಾಗಿ ಈ ಹೋರಾಟ ನಡೆಯುತ್ತಿದೆ ಎಂದರು.
ಆ 28ರ ಪ್ರತಿಭಟನೆಗೂ ಬೆಂಬಲ
ಆ 28ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದೂ ಸೌಜನ್ಯಳಿಗೆ ನ್ಯಾಯ ಕೊಡಿಸಲು ನಡೆಯುತ್ತಿರುವ ಹೋರಾಟವಾಗಿದ್ದು ಅದಕ್ಕೂ ಬೆಂಬಲವಿದೆ. ನ್ಯಾಯಕ್ಕಾಗಿ ಯಾರು ಹೋರಾಟ ಮಾಡಿದರೂ ಅದನ್ನು ಬೆಂಬಲಿಸುತ್ತೇವೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಜಾಪ್ರಭುತ್ವ ವೇದಿಕೆಯ ಕಾರ್ಯದರ್ಶಿ ಅನಿಲ್ ಕುಮಾರ್, ಮನೋಜ್ ಕುಂಜರ್ಪ, ಹರೀಶ್ ಕುಮಾರ್ ಬರಮೇಲು, ಪ್ರಜ್ವಲ್ ಕೆ.ವಿ ಹಾಗೂ ಇತರರು ಉಪಸ್ಥಿತರಿದ್ದರು.