ಬೆಳ್ತಂಗಡಿ: ಮೂಲ ಸೌಕರ್ಯಗಳ ಕೊರತೆ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ
ಬೆಳ್ತಂಗಡಿ; ನಾವೂರು ಗ್ರಾಮದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ್ದ ಸ್ಥಳಕ್ಕೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ವೈಜನ್ನ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ ಅವರ ಮನವೊಲಿಸಿ ಮತದಾನದಲ್ಲಿ ಭಾಗವಹಿಸಲು ಒಪ್ಪಿಸಿದ್ದಾರೆ.
ಕೈಕಂಬದಿಂದ ಹತ್ಯಡ್ಕ , ಬಳ್ಳಿತೋಟ , ಬೋಜಾರ ಸೇರಿದಂತೆ ನಡ ಗ್ರಾಮದ ಮೂಡಾಯಿಬೆಟ್ಟು ಸಂಪರ್ಕಿಸುವ ರಸ್ತಯು ಸಂಪೂರ್ಣ ನಾದುರಸ್ತಿಯಲ್ಲಿದ್ದು , ಜನ ಮತ್ತು ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ. ತಾಲೂಕಿನಲ್ಲಿ 2019 ರಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಕೈಕಂಬದಲ್ಲಿ ಸೇತುವೆಯು ಬಿರುಕು ಬಿಟ್ಟಿತು. ಆದರೂ ಈ ತನಕ ಯಾವುದೇ ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಸಾರ್ವಜನಿಕರು ಬ್ಯಾನರ್ ಅಳವಡಿಸಿದ್ದರು.
ಕೈಕಂಬದಿಂದ ಬೋಜಾರ ತನಕ ರಸ್ತೆ ಮತ್ತು ಸೇತುವೆಯನ್ನು ವೀಕ್ಷಿಸಿದ ಕಾರ್ಯ ನಿರ್ವಹಣಾಧಿಕಾರಿಯವರು ಈರಸ್ತೆ ಹಾಗೂ ಸೇತುವೆಯನ್ನು ಮುಖ್ಯ ಆದ್ಯತೆಯ ಮೇರೆಗೆ ಪುನರ್ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮೇಲಾಧಿಕಾರಿಗಳು ಸೇರಿದಂತೆ ಸರ್ಕಾರಕ್ಕೆ ಪೋಟೋ ಸಮೇತ ವರದಿ ಮಾಡಲಾಗುವುದು, ಚುನಾವಣೆ ಮುಗಿದ ಬಳಿಕ ರಸ್ತೆಯ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಸಾರ್ವಜನಿಕರಿಗೆ ಭರವಸೆ ನೀಡಿದರು.
ಅಧಿಕಾರಿಗಳ ಮಾತಿಗೆ ಬೆಲೆ ನೀಡಿದ ಸಾರ್ವಜನಿಕರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅನ್ನು ತೆರವುಗೊಳಿಸಿದರು. ಚುನಾವಣೆ ಬಳಿಕ ಕಾಮಗಾರಿ ಕೈಗೊಳ್ಳದಿದ್ದರೆ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರಿಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದರು.
ಬೆಳ್ತಂಗಡಿ ತಾಲೂಕು ಪಂಚಾಯತು ಕಛೇರಿ ಅಧಿಕ್ಷಕ ಪ್ರಶಾಂತ್ ಬಳೆಂಜ , ನಾವೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತ ಪೂಜಾರಿ , ಸಾರ್ವಜನಿಕರಾದ ಬಂಗಾಡಿ ಸಿಎ ಬ್ಯಾಂಕ್ ನಿವೃತ್ತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಉಮೇಶ್ ಹತ್ಯಡ್ಕ , ಸುರೇಂದ್ರ ಪೂಜಾರಿ , ಜನಾರ್ದನ ನೈಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.