ಬೆಳ್ತಂಗಡಿ: ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ ಕಲ್ಲಡ್ಕ ಭಟ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಸಿ.ಪಿ.ಐ.ಎಂ ಒತ್ತಾಯ
ಬೆಳ್ತಂಗಡಿ: ಭಾರತೀಯ ಮಹಿಳೆಯರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ದ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಿ.ಪಿ.ಐ.ಎಂ ಮುಖಂಡ ಬಿ.ಎಂ ಭಟ್ ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಸಿಪಿಐಎಂ ಪಕ್ಷ ಹಾಗೂ ಸಹ ಸಂಘಟನೆಗಳ ನೇತೃತ್ವದಲ್ಲಿ ಕಲ್ಲಡ್ ಪ್ರಭಾಕರ ಭಟ್ ಅವರ ಹೇಳಿಕೆಯನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಲ್ಲಡ ಪ್ರಭಾಕರ ಭಟ್ ಅವರು ತಮ್ಮ ಮಹಿಳಾ ವಿರೋಧೀ ಹೇಳಿಕೆಯ ಮೂಲಕ ಆರ್.ಎಸ್.ಎಸ್.ನ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ. ಮಹಿಳಾ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಆರ್.ಎಸ್.ಎಸ್. ಸಂಘಟನೆಯನ್ನು ನಿಷೇಧಿಸುವ ಕಾರ್ಯವನ್ನು ಕೂಡಲೇ ಸರಕಾರ ಮಾಡಬೇಕು ಎಂದು ಒತ್ತಾಯಿಸಿದರು. ಭಾರತೀಯ ಸಂಸ್ಕೃತಿ ಮಹಿಳೆಯನ್ನು ಗೌರವಿಸುವುದಾಗಿದೆ. ಆದರೆ ಆರ್.ಎಸ್.ಎಸ್.ನದು ಮಹಿಳಾ ವಿರೋಧೀ ಸಂಸ್ಕೃತಿಯಾಗಿದೆ ಎಂದರು.
ದಲಿತ ಹಕ್ಕುಗಳ ಸಮನ್ವಯ ಸಮಿತಿಯ ಕಾರ್ಯದರ್ಶಿ ಈಶ್ವರಿ ಮಾತನಾಡಿ ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರನ್ನು ಕಂಡರಾಗದ ಈ ಮನುವಾದಿಗಳು ಮಹಿಳಾ ವಿರೋಧೀ ಹೇಳಿಕೆಗಳನ್ನು ನೀಡುತ್ತಿದ್ದರೂ ಸರಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವುದು ದುರಂತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಜಯರಾಮ ಮಯ್ಯ, ಜಯಶ್ರೀ, ಕುಮಾರಿ, ಸಂಜೀವನಾಯ್ಕ, ಸುಜಾತಾ,ಪುಷ್ಪ, ಹಾಗೂ ಇತರರು ಇದ್ದರು.
ಪ್ರತಿಭಟನಾಕಾರರು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.