ಬೆಳ್ತಂಗಡಿ | ಅಪ್ರಾಪ್ತ ವಯಸ್ಸಿನ ಬಾಲಕಿಯ ಗ್ಯಾಂಗ್ ರೇಪ್: ಬಾಲಕ ಸಹಿತ ಮೂವರ ಬಂಧನ
ಬೆಳ್ತಂಗಡಿ, ಜೂ.2: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸಹಿತ ಮೂವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ತಡವಾಗಿ ಬೆಳಕಿಗೆ ಬಂದ ಈ ಪ್ರಕರಣದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಹಾಗೂ ಪೊಕ್ಸೊ ಕಾಯ್ದೆಯಡಿಯಲ್ಲಿ ಮೂವರ ವಿರುದ್ಧ ಮೇ 31ರಂದು ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ನಿವಾಸಿಗಳಾದ ಮಹಮ್ಮದ್ ಇಕ್ಸಾಲ್(26) ಫಾರೂಕ್(19) ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಜೂ.1 ರಂದು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಪ್ರಾಪ್ತ ವಯಸ್ಸಿನ ಬಾಲಕನನ್ನು ಮಂಗಳೂರು ಬಾಲ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ಮಂಗಳೂರು ರಿಮ್ಯಾಂಡ್ ಹೋಂಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಮೂವರು ಸೇರಿ ಒತ್ತಾಯಪೂರ್ವಕವಾಗಿ ಅತ್ಯಾಚಾರವೆಸಗಿದ್ದು, ಇದೀಗ ಬಾಲಕಿ 6 ತಿಂಗಳ ಗರ್ಭಿಣಿಯಾಗಿದ್ದಾಳೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಸಂತ್ರಸ್ತೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ 31ರಂದು ನೀಡಿದ್ದಾಳೆ. ಆ ದೂರಿನನ್ವಯ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಮೂವರ ವಿರುದ್ಧ ಗ್ಯಾಂಗ್ ರೇಪ್ ಮತ್ತು ಪೊಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.