ಬೆಂದೂರ್‌ವೆಲ್ ಪಂಪ್‌ಹೌಸ್ ನೀರು ಕುಡಿಯಲು ಸುರಕ್ಷಿತವಲ್ಲ; ಪ್ರಯೋಗಾಲಯ ವರದಿಯಿಂದ ದೃಢ: ಐವನ್ ಡಿಸೋಜಾ
►ಸುರತ್ಕಲ್, ಪಣಂಬೂರು ಭಾಗಕ್ಕೆ ಈ ನೀರು ಪೂರೈಕೆ ►5 ವರ್ಷಗಳಲ್ಲಿ ನೀರು ಪೂರೈಕೆ ಖರ್ಚಿನ ಶ್ವೇತ ಪತ್ರಕ್ಕೆ ಒತ್ತಾಯ
ಮಂಗಳೂರು: ಪಾಲಿಕೆ ವ್ಯಾಪ್ತಿಯ ಒಂದು ಭಾಗಕ್ಕೆ ಶುದ್ಧೀಕರಿಸದ ನೀರನ್ನು ನೀಡುತ್ತಿರುವ ಪಾಲಿಕೆಯ ವಿಪಕ್ಷ ಸದಸ್ಯರ ಆರೋಪವನ್ನು ಮತ್ತೆ ಪ್ರತಿಪಾದಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬೆಂದೂರು ಪಂಪ್‌ಹೌಸ್‌ನ ನೀರಿನ ಗುಣಮಟ್ಟದ ಪ್ರಯೋಗಾಲಯ ಪರೀಕ್ಷೆಯಿಂದ ಈ ನೀರು ಕುಡಿಯಲು ಯೋಗ್ಯವಲ್ಲ ಎಂಬುದು ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಮನಪಾ ಕಟ್ಟಡದ ತಮ್ಮ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆಸಲಾದ ಬೆಂದೂರ್ ಪಂಪ್‌ಹೌಸ್‌ನ ನೀರಿನ ಗುಣಮಟ್ಟ ತಪಾಸಣೆಯ ವರದಿಯನ್ನು ಉಲ್ಲೇಖಿಸಿ ಅವರು ಮಾತನಾಡಿದರು.
ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕರು ಹಾಗೂ ಸದಸ್ಯರು ನಗರದ ಜನರಿಗೆ ಪೂರೈಕೆ ಮಾಡುವ ನೀರಿನ ಶುದ್ಧತೆಯ ಬಗ್ಗೆ ಆರೋಪಿಸಿದ್ದರು. ಆಡಳಿತ ಪಕ್ಷದ ಸದಸ್ಯರನೇಕರು ಕೂಡಾ ಎಸ್‌ಟಿಪಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಧ್ವನಿ ಎತ್ತಿದ್ದರು. ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಕೆಯ ಆಡಳಿತ ಹಾಗೂ ವಿಪಕ್ಷ ಸದಸ್ಯರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಲು ನಾನು ಸಲಹೆ ನೀಡಿದ್ದೆ. ನಮ್ಮ ಉದ್ದೇಶ ವ್ಯವಸ್ಥೆ ಸರಿ ಆಗಬೇಕು ಎಂಬುದಾಗಿತ್ತು. ಆದರೆ ಆಡಳಿತ ಪಕ್ಷವಾದ ಬಿಜೆಪಿಯ ಹಿರಿಯ ಸದಸ್ಯರು ಮಾತ್ರವಲ್ಲದೆ ಮೇಯರ್ ಕೂಡಾ ಶುದ್ಧ ನೀರನ್ನೇ ಜನರಿಗೆ ನೀಡುವುದಾಗಿ ಹೇಳಿದ್ದರಲ್ಲದೆ, ಸತ್ಯಶೋಧನಾ ಸಮಿತಿಯ ಸಲಹೆಯನ್ನು ತಳ್ಳಿ ಹಾಕಿದ್ದರು. ಆದರೆ ಜವಾಬ್ಧಾರಿಯ ನೆಲೆಯಲ್ಲಿ ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್ ನೇತೃತ್ವದ ಸತ್ಯ ಶೋಧನಾ ಸಮಿತಿಯು ಈಗಾಗಲೇ ಪಚ್ಚನಾಡಿ, ಬೆಂದೂರ್‌ವೆಲ್, ಕಡೆಕಾರು, ಜಪ್ಪಿನೊಗರು, ಚೇಳ್ಯಾರು, ಮದ್ಯ ಕಂಡೇವು, ಮುಚ್ಚೂರು ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದ್ದಲ್ಲದೆ ಎಸ್‌ಟಿಪಿ ಹಾಗೂ ಪಂಪ್‌ಹೌಸ್‌ಗಳಿಗೆ ಭೇಟಿ ನೀಡಿ ವರದಿ ಸಂಗ್ರಹಿಸಿದೆ. ಬೆಂದೂರ್‌ವೆಲ್‌ನ ಪಂಪ್‌ಹೌಸ್‌ನಿಂದ ಸುರತ್ಕಲ್, ಪಣಂಬೂರು, ಕೂಳೂರು, ಕೊಟ್ಟಾರ, ಕೋಡಿಕಲ್ ಸೇರಿ ಸುಮಾರು 10ಕ್ಕೂ ಅಧಿಕ ವಾರ್ಡ್‌ಗಳಿಗೆ ಪೂರೈಕೆಯಾಗುವ ನೀರಿನ ಮಾದರಿಯನ್ನು ಫಿಶರೀಸ್ ಕಾಲೇಜಿನ ಪ್ರಯೋಗಾಲಯದಲ್ಲಿ ತಪಾಸಣೆಗೊಳಪಡಿಸಲಾಗಿದೆ. ವರದಿಯಲ್ಲಿ ಈ ನೀರು ಕುಡಿಯಲು ಯೋಗ್ಯವಲ್ಲ ಎಂದು ಉಲ್ಲೇಖಿಸಲಾಗಿದೆ. ಪಾಲಿಕೆಯ ಆಡಳಿತ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಕಳೆದ ಐದು ವರ್ಷಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಸಂಗ್ರಹ ಸೇರಿದಂತೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.
ಪಾಲಿಕೆಯ ವಿಪಕ್ಷ ನಾಯಕರ ನೇತೃತ್ವದ ಸತ್ಯಶೋಧನಾ ಸಮಿತಿ ಈಗಾಗಲೇ ಭೇಟಿ ನೀಡಿರುವ ಕಡೆಗಳಲ್ಲಿ ನಗರದ ಎಸ್‌ಟಿಪಿಗಳು, ವೆಟ್‌ವೆಲ್‌ಗಳ ನರಕದರ್ಶನವಾಗಿದೆ. ಪಾಲಿಕೆ ವ್ಯಾಪ್ತಿಯ ನಾಲ್ಕು ಎಸ್‌ಟಿಪಿಗಳು ಹಾಗೂ 23 ವೆಟ್‌ವೆಟ್‌ವೆಲ್‌ಗಳಲ್ಲಿ ಬಹುತೇಕ ಎಲ್ಲವೂ ವೈಫಲ್ಯದಿಂದ ಕೂಡಿದೆ. ಮೂಲಭೂತ ಸೌಕರ್ಯಗಳು ಹದಗೆಟ್ಟಿರುವುದು ಕಂಡು ಬಂದಿದೆ. ಸಮಿತಿಯು ಈ ಕುರಿತು ವರದಿ ಸಿದ್ಧಪಡಿಸಿ ಜ. 17ರಂದು ನಗರಕ್ಕೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿಯವರಿಗೆ ದೂರು ಸಲ್ಲಿಸಲಿದೆ ಎಂದವರು ಹೇಳಿದರು.
ಸುರತ್ಕಲ್ ಮದ್ಯದ ಎಸ್‌ಟಿಪಿ ಘಟಕದಲ್ಲಿ ಜನರೇಟರ್ ವ್ಯವಸ್ಥೆಯನ್ನೇ ಮಾಡಲಾಗಿಲ್ಲ. ಅಗತ್ಯ ಸಿಬ್ಬಂದಿಯೂ ಇಲ್ಲ. ಪ್ರಯೋಗಾಲಯ ಇದ್ದರೂ ಮೂರು ತಿಂಗಳಿನಿಂದ ಅಲ್ಲಿ ಯಾವುದೇ ಪರೀಕ್ಷೆ ನಡೆಸಲಾಗಿಲ್ಲ. ಎಸ್‌ಟಿಪಿಗೆ ಒಳಚರಂಡಿ ನೀರೇ ಬರುತ್ತಿಲ್ಲ. ಬದಲಾಗಿ ಕೊಳಚೆ ನೀರು ರಾಜಕಾಲುವೆ ಮೂಲಕ ಕಂಡೇವು ಕೆರೆಗೆ ಹೋಗಿ ನಂದಿನಿ ನದಿ ಸೇರುತ್ತಿರು ವುದು ಕಂಡು ಬಂದಿದೆ. ವಿಶೇಷವೆಂದರೆ, ಜ. 9ರಂದು ಅಲ್ಲಿಗೆ ಭೇಟಿ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೂ ಅಲ್ಲಿನ ಅವ್ಯವಸ್ಥೆಯ ಬಗ್ಗೆ ವರದಿ ನೀಡಿದ್ದಾರೆ. ಸಾರ್ವಜನಿಕರ ದೂರಿನ ಮೇರೆಗೆ ಭೇಟಿ ನೀಡಿರುವ ತಮಗೆ ಮುಚ್ಚೂರಿನ ವೆಟ್‌ವೆಲ್ ಪಂಪ್‌ಗಳ ರಿಪೇರಿಯಿಂದಾಗಿ ನಿರ್ವಹಣೆಯಾಗುತ್ತಿಲ್ಲ ಎಂಬುದು ಕಂಡು ಬಂದಿದೆ. ಹಾಗಾಗಿ ಒಳಚರಂಡಿ ನೀರು ಪೈಪ್‌ಲೈನ್ ಮೂಲಕ ನಂದಿನಿ ನದಿ ಸೇರುತ್ತಿದೆ. ಸುರತ್ಕಲ್‌ನ ಮದ್ಯಪದವಿನಲ್ಲಿ ಕಾರ್ಯಾಚರಿಸು ತ್ತಿರುವ ಎಸ್‌ಟಿಪಿ 2015ರಿಂದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾನಿಗೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಮುಚ್ಚೂರಿನ ವೆಟ್‌ವೆಲ್‌ನ ತೊಂದರೆಯಿಂದ ಮದ್ಯದ ಎಸ್‌ಟಿಪಿಗೆ ಒಳಚರಂಡಿ ನೀರು ಬರುತ್ತಿಲ್ಲ ಎಂಬುದೂ ತಪಾಸಣೆಯ ವೇಳೆ ಕಂಡುಬಂದಿದೆ. ಈ ಬಗ್ಗೆ ಮಹಜರು ಮಾಡಲು ಪಾಲಿಕೆ ಇಂಜಿನಿಯರ್ ಕರೆದರೂ ಬಂದಿಲ್ಲ ಎಂಬುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ವರದಿಯಲ್ಲಿ ತಿಳಿಸಿದೆ ಎಂದು ಐವನ್ ಡಿಸೋಜಾ ಹೇಳಿದರು.
ಪಚ್ಚನಾಡಿ ಎಸ್‌ಟಿಪಿಯಲ್ಲಿ ಜನರೇಟರ್ ವ್ಯವಸ್ಥೆ ಇದ್ದರೂ ಡೀಸೆಲ್ ಇಲ್ಲ. ರಾತ್ರಿ ಹೊತ್ತು ಎಸ್‌ಟಿಪಿ ಕಾರ್ಯಾಚರಣೆ ಸ್ಥಗಿತ. ಪಾಲಿಕೆಯದ್ದು ಇದು ಯಾವ ರೀತಿಯ ಆಡಳಿತ ಎಂದು ಅರ್ಥವಾಗುತ್ತಿಲ್ಲ. ಕಾವೂರಿನಲ್ಲಿ ಎಂಎಸ್‌ಇಝೆಡ್‌ನಿಂದ ನಿರ್ವಹಿಸಲ್ಪಡುವ ಎಸ್‌ಟಿಪಿ ಹೊರತುಪಡಿಸಿ ಉಳಿದ ಮೂರು ಎಸ್‌ಟಿಪಿಗಳೂ ನಿರ್ವಹಣೆಯ ಕೊರತೆಯಿಂದ ಕೂಡಿವೆ. ಕಳೆದ ಐದು ವರ್ಷಗಳಿಂದ ಜನರಿಗೆ ಶುದ್ಧ ನೀರು, ಒಳಚರಂಡಿ ವ್ಯವಸ್ಥೆ ಕೊಡಲು ಆಗದ ಪಾಲಿಕೆ ಆಡಳಿತ ಎರಡು ವರ್ಷಗಳ ಹಿಂದೆ ತ್ರಿಬಲ್ ಇಂಜಿನ್ ಸರಕಾರ ಇದ್ದರೂ ಇಷ್ಟು ನಿಷ್ಕ್ರಿಯವಾಗಿ ಕಾರ್ಯನಿರ್ವಹಿಸಿದೆ ಎಂದು ಆರೋಪಿಸಿದರು.
ಕಳೆದ ಕೆಲ ವರ್ಷಗಳಿಂದೀಚೆಗೆ ಕಲುಷಿತಗೊಂಡಿರುವ ರಾಜ್ಯದ ನದಿಗಳಲ್ಲಿ ನೇತ್ರಾವತಿಯೂ ಸೇರಿರುವುದು ಜನರ ಕುಡಿಯುವ ನೀರಿನ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಪ್ರಾಥಮಿಕ ಪರೀಕ್ಷೆಯ ನೀರು ಕುಡಿಯಲು ಯಾವುದೇ ರೀತಿಯಲ್ಲಿ ಯೋಗ್ಯವಾಗಿಲ್ಲ. ಹಾಗಿದ್ದರೂ ಮೇಯರ್‌ರವರು ವ್ಯವಸ್ಥೆಯನ್ನು ಸರಿಪಡಿಸುವ ಹೇಳಿಕೆ ನೀಡುವ ಬದಲು ತಾವು ಶುದ್ಧ ನೀರನ್ನೇ ಕೊಡುವುದಾಗಿ ನೀಡಿರುವ ಹೇಳಿಕೆಗೆ ಆಕ್ಷೇಪವಿದೆ. ಸತ್ಯ ಶೋಧನಾ ವರದಿಯಲ್ಲಿ ಕಂಡು ಬರುವ ನ್ಯೂನ್ಯತೆಗಳನ್ನು ಸರಪಡಿಸುವ ನಿಟ್ಟಿನಲ್ಲಿ ಸರಕಾರ ಮಟ್ಟದಲ್ಲಿ ಕ್ರಮ ಕೈಗೊಳ್ಳುವಲ್ಲಿಯೂ ಸಮಿತಿ ತನ್ನ ಜವಾಬ್ದಾರಿ ನಿರ್ವಹಿಸಲಿದೆ ಎಂದು ಐವನ್ ಡಿಸೋಜಾ ಹೇಳಿದರು.
ಗೋಷ್ಟಿಯಲ್ಲಿ ಶಶಿಧ ಹೆಗ್ಡೆ, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಕೇಶವ ಮರೋಳಿ, ಅಶ್ರಫ್, ಕಿಶೋರ್ ಶೆಟ್ಟಿ, ಸತೀಶ್ ಪೆಂಗಲ್, ಚೇತನ್ ಕುಮಾರ್, ಹೇಮಂತ್ ಗರೋಡಿ ಮೊದಲಾದವರು ಉಪಸ್ಥಿತರಿದ್ದರು.
‘ಪಾಲಿಕೆಯ ಕುಡಿಯುವ ನೀರು ಪೂರೈಕೆಯ ಜಾಲ ಹಾಗೂ ಎಸ್‌ಟಿಪಿಗಳ ಅವ್ಯವಸ್ಥೆ ಬಗ್ಗೆ ಸತ್ಯಶೋಧನಾಏ ಸಮಿತಿ ವಿಸ್ತೃತವಾಗಿ ಅಧ್ಯಯನ ನಡೆಸಿದೆ. ಎಸ್‌ಟಿಪಿಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಕಲುಷಿತ ನೀರು ಚರಂಡಿಗಳ ಮೂಲಕ ಕೆರೆ, ನದಿಗಳಿಗೆ ಸೇರುತ್ತಿದೆ. ಈ ಬಗ್ಗೆ ಎರಡು ವರ್ಷಗಳಿಂದ ಪಾಲಿಕೆ ಸಭೆಯಲ್ಲಿ ಆಡಳಿತ ಪಕ್ಷದ ಗಮನವನ್ನು ವಿಪಕ್ಷ ಸದಸ್ಯರು ಸೆಳೆಯುತ್ತಿದ್ದೇವೆ. ಜನರ ಕಳಕಳಿಯಿಂದ ಅಧ್ಯಯನ ನಡೆಸಿದ್ದು, ಮುಂದೆ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪಕ್ಷದ ಸದಸ್ಯರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲಿದ್ದೇವೆ. ಈ ನಿಟ್ಟಿನಲ್ಲಿ ಮುಂದಿನ ಪಾಲಿಕೆ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇವೆ.’
ಅನಿಲ್ ಕುಮಾರ್, ವಿಪಕ್ಷ ನಾಯಕ, ಮನಪಾ