ಬೈಕಂಪಾಡಿ: ಎ.ಪಿ.ಎಂ.ಸಿ ಮಾರುಕಟ್ಟೆ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಸರ್ಕಾರಕ್ಕೆ ಮನವಿ
ಸುರತ್ಕಲ್: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬೈಕಂಪಾಡಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದ ಎದುರು ನೂತನ ಇಂದಿರಾ ಕ್ಯಾಂಟೀನ್ ತೆರೆಯುವಂತೆ ಆಗ್ರಹಿಸಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪದ ಬೈಕಂಪಾಡಿಯು ಜನ ನಿಬಿಡ ಪ್ರದೇಶವಾಗಿದ್ದು, ಇಲ್ಲಿ ಕೈಗಾರಿಕಾ ಪ್ರದೇಶ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣವು ಇರುವುದರಿಂದ ಹಲವಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಆರ್ಥಿಕವಾಗಿ ತೀರಾ ಬಡವರಾಗಿರುವ ಇಲ್ಲಿನ ಕಾರ್ಮಿಕ ವರ್ಗವು ತಮ್ಮ ದೈನಂದಿನ ಊಟೋಪಚಾರಕ್ಕೆ ಖಾಸಗಿ ಹೋಟೇಲ್ಗಳನ್ನು ಆಶ್ರಯಿಸುತ್ತಿದ್ದು, ದುಬಾರಿ ಹಣ ತೆತ್ತು ಊಟ, ಉಪಹಾರಗಳನ್ನು ಪಡೆಯುವುದು ಇವರಿಗೆ ತಾಸದಾಯಕವಾಗಿದೆ. ಈ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ತೆರೆದರೆ ಇಲ್ಲಿನ ಬಡ ಕಾರ್ಮಿಕರಿಗೆ ಪ್ರಯೋಜನವಾಗುವುದರಿಂದ ತಾವು ಈ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಅನುಮತಿ ನೀಡಬೇಕೆಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಪುರ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ. ಎಚ್. ಮುನಿಯಪ್ಪ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರಿಗೆ ಮನವಿ ಸಲ್ಲಿಸಲಾಯಿತು.