ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ, ಬಿಜೆಪಿ ಆಡಳಿತ ಎಲ್ಲರಿಗೂ ಸಾಕಾಗಿ ಹೋಗಿದೆ: ದಿನೇಶ್ ಗುಂಡೂರಾವ್
ಉಳ್ಳಾಲ: ಈ ಬಾರಿ ಚುನಾವಣೆಯಲ್ಲಿ ದೇಶದಲ್ಲೇ ಮಹತ್ತರ ಬದಲಾವಣೆ ಕಾಣುತ್ತಿದೆ. ಕೇಂದ್ರ ಸರ್ಕಾರದಿಂದ ಜನರ ಬದುಕಿನಲ್ಲಿ ಬದಲಾವಣೆ ಆಗಿಲ್ಲ. ಕೇಂದ್ರ ಸರ್ಕಾರ ದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳವಾರ ಉಳ್ಳಾಲ ದರ್ಗಾ ಸಂದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಪೀಡಿತ ಸಮಸ್ಯೆಗಳಿಗೆ ಸುಪ್ರೀಂ ಕೋರ್ಟ್ ಮೊರೆ ಹೊಗಿ ನ್ಯಾಯ ಪಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ. ಎಲ್ಲದಕ್ಕಿಂತಲೂ ಮುಖ್ಯ ವಾಗಿ ಕರ್ನಾಟಕ ದಿಂದ ಆಯ್ಕೆ ಆಗಿರುವ ಸಂಸದರು ನಮ್ಮ ರಾಜ್ಯದ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದರು.
ರಾಜ್ಯದ ಜನತೆಗೆ ನ್ಯಾಯ ಸಿಗಬೇಕು ಎಂಬುದು ಕಾಂಗ್ರೆಸ್ ಪಕ್ಷದ ಹೋರಾಟ ಆಗಿದೆ. ರಾಜ್ಯಕ್ಕೂ ಕೇಂದ್ರ ಕ್ಕೂ ನಿಕಟವಾದ ಸಂಬಂಧ ಇರಬೇಕು. ಈವರೆಗೆ ನಾವು 18 ಸ್ಥಾನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆವು. ಈಗಿನ ವಾತಾವರಣ ನೋಡುವಾಗ 20 ಕ್ಕೂ ಅಧಿಕ ಸ್ಥಾನಗಳು ಕಾಂಗ್ರೆಸ್ ಗೆ ಸಿಗಲಿದೆ. ನಿರೀಕ್ಷೆಗೂ ಮೀರಿ ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಅಭ್ಯರ್ಥಿ ಕಣದಲ್ಲಿ ಇದ್ದಾರೆ. ಜನರು ವಿಶ್ವಾಸ ಪರ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆ ಎಲ್ಲರ ಮನೆಗೆ ತಲುಪಿದೆ. ಮಂಗಳೂರು, ಉಡುಪಿ-ಚಿಕ್ಕಮಗಳೂರು, ಶಿವಮೊಗ್ಗ ಈ ಮೂರರಲ್ಲಿ ಪೈಪೋಟಿ ಇದೆ. ಈ ಮೂರು ಕ್ಷೇತ್ರಗಳ ಪೈಕಿ ಎರಡರಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಬಿಜೆಪಿ ಆಡಳಿತ ಎಲ್ಲರಿಗೂ ಸಾಕಾಗಿ ಹೋಗಿದೆ. ಆಡಳಿತಾವಧಿಯಲ್ಲಿ ಜನರ ಮೇಲೆ ಒತ್ತಡ ತಂದು ಆಡಳಿತ ನಡೆಸಿದೆ. ಇದರಿಂದ ಜನರು ಬಿಜೆಪಿ ಕಾರ್ಯಕರ್ತರು ಕಂಗಾಲಾಗಿ ಈ ಪಕ್ಷ ದ ಆಡಳಿತ ಸಾಕು ಎನ್ನುವಷ್ಟರ ಮಟ್ಟಿಗೆ ತಲುಪಿದ್ದಾರೆ ಎಂದರು.
ಕೇಂದ್ರ ಸರ್ಕಾರ ನಮಗೆ ಏನು ಕೊಟ್ಟಿಲ್ಲ. ಅದಕ್ಕಾಗಿ ಚೊಂಬು ಎಂದು ನಾವು ಹೇಳುತ್ತಿದ್ದೇವೆ. ಈ ಚೊಂಬು ಅನ್ನು ಸುಪ್ರೀಂಕೋರ್ಟ್ ನ್ಯಾಯ ಒದಗಿಸುವ ಮೂಲಕ ಸ್ವಲ್ಪ ತುಂಬಿದೆ. ರಾಜ್ಯದ ಅಭಿವೃದ್ಧಿಗೆ ಏನು ಸಾಧನೆ ಮಾಡದ ಈ ಬಿಜೆಪಿ ಸರ್ಕಾರ ಕ್ಕೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಆರೋಪಿಸಿದರು.
ಇದೇ ವೇಳೆ ದರ್ಗಾ ಅಧೀನದಲ್ಲಿರುವ ಶಾಲಾ ಕಾಲೇಜು ಗಳ ದಾಖಲಾತಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರ ಚುನಾವಣಾ ಕಾರ್ಯಾಧ್ಯಕ್ಷ ಯು.ಟಿ ಇಫ್ತಿಕಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ಉಳ್ಳಾಲ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ, ಇಸಾಕ್ ಮೇಲಂಗಡಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೆ, ಹಸೈನಾರ್ ಕೊಟೆಪುರ, ಲೆಕ್ಕ ಪರಿಶೋಧಕ ಫಾರೂಕ್ ಕಲ್ಲಾಪು, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್ ಹಳೆ ಕೋಟೆ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಪಿಲಾರ್ , ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ , ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.