ತೊಕ್ಕೊಟ್ಟಿನಲ್ಲಿ ಬಿಜೆಪಿ ಯುವಮೋರ್ಚಾ ಪ್ರತಿಭಟನೆ, ಹಲವರು ಪೊಲೀಸರ ವಶಕ್ಕೆ
ಉಳ್ಳಾಲ: ರಾಜ್ಯಪಾಲರ ವಿರುದ್ಧ ಮಾತನಾಡಿರುವ ಬಗ್ಗೆ ಐವನ್ ಡಿಸೋಜ ವಿರುದ್ಧ ದೂರು ಸಲ್ಲಿಸಿದರೂ ಎಫ್ಐಆರ್ ದಾಖಲಿಸಲು ಪೊಲೀಸರು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಹಾಗೂ ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ಯುವಮೋರ್ಚಾ ನೇತೃತ್ವದಲ್ಲಿ ಬುಧವಾರ ಸಂಜೆ ತೊಕ್ಕೊಟ್ಟು ಫ್ಲೈ ಓವರ್ ಕೆಳಗಡೆ ಪ್ರತಿಭಟನೆ ನಡೆಯಿತು.
ಈ ವೇಳೆ ರಸ್ತೆ ತಡೆಯಲು ಯತ್ನಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಚುನಾವಣೆ ವೇಳೆ ಪಟಾಕಿ ಸಿಡಿಸಿದರೂ ಬಿಜೆಪಿಗರ ವಿರುದ್ಧ ಕೇಸು ಜಡಿದು ಪೊಲೀಸ್ ಇಲಾಖೆಯನ್ನು ರಾಜ್ಯ ಕಾಂಗ್ರೆಸ್ ಸರಕಾರವು ದುರ್ಬಳಕೆ ಮಾಡುತ್ತಿದೆ. ಆದರೆ ದೇಶದ್ರೋಹದ ಹೇಳಿಕೆ ಕೊಟ್ಟ ಎಂಎಲ್ ಸಿ ಐವನ್ ಡಿಸೋಜರ ವಿರುದ್ಧ ನರಸತ್ತ ರಾಜ್ಯ ಕಾಂಗ್ರೆಸ್ ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಐವನ್ ಅವರೇ ನಿಮಗೆ ತಾಕತ್ತಿದ್ದರೆ ಶಾಸಕ ವೇದವ್ಯಾಸ್ ಕಾಮತ್ ವಿರುದ್ಧ ರೌಡಿಶೀಟ್ ತೆರೆದು ನೋಡಿ. ನೀವು ಬಂದಿರುವ ಹಿಂಬಾಗಿಲಿನಿಂದಲೇ ನಿಮ್ಮನ್ನು ಓಡಿಸಲಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರತಿಭಟನೆ ವೇಳೆ ಸವಾಲೆಸೆದಿದ್ದಾರೆ.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ, ಮುಡಾ ಹಗರಣದಲ್ಲಿ ಭಾಗಿಯಾಗಿರುವ ಸಿದ್ಧರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಅವರು ಆಗ್ರಹಿಸಿದರು.
ಬಿಜೆಪಿ ಮಂಗಳೂರು ಮಂಡಲದ ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಜಿಲ್ಲಾ ವಕ್ತಾರ ಮೋಹನ್ ರಾಜ್ ಕೆ.ಆರ್, ಮುಖಂಡರಾದ ಟಿ.ಜಿ.ರಾಜಾರಾಮ್ ಭಟ್, ಯಶವಂತ ಅಮೀನ್, ಮಂಡಲ ಪ್ರದಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು, ಸುಜಿತ್ ಮಾಡೂರು, ಮಂಡಲ ಯುವ ಮೋರ್ಚಾ ಅಧ್ಯಕ್ಷ ಮುರಳಿ ಕೊಣಾಜೆ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾಧವಿ ಉಳ್ಳಾಲ್, ಪ್ರಮುಖರಾದ ಮನೋಜ್ ಆಚಾರ್ಯ, ಚಂದ್ರಶೇಖರ್ ಉಚ್ಚಿಲ್, ನಿಶಾನ್ ಪೂಜಾರಿ, ರಾಜೇಶ್ ಉಳ್ಳಾಲ್, ಜಯಶ್ರೀ ಕರ್ಕೇರ, ಸುಮನ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.