ಸೆ. 7: ಬೊಲ್ಕಾಂವ್, ಸಾಹಿತ್ಯ ಸರಣಿ ಕಾರ್ಯಕ್ರಮಕ್ಕೆ ಚಾಲನೆ
ಮಂಗಳೂರು, ಸೆ.4: ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ವಿಶೇಷ ಪ್ರೊತ್ಸಾಹ ನೀಡುತ್ತಾ ಬಂದಿರುವ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ 44 ವಸಂತಗಳನ್ನು ಪೂರೈಸಿದ ಹಿರಿಯ ಕೊಂಕಣಿ ಸಂಸ್ಥೆಯು ಸಾಹಿತ್ಯ ಸಾದರೀಕರಣಕ್ಕಾಗಿಯೇ ಸಂಸ್ಥೆಯ ಅಂಗಳದಲ್ಲಿ ಬೊಲ್ಕಾಂವ್(ಬಾಲ್ಕನಿ) ಎಂಬ ವಿಶಿಷ್ಟ ಕಾರ್ಯಕ್ರಮ ಸರಣಿಯನ್ನು ಆರಂಭಿಸಲಿದೆ.
ಈ ಕಾರಣಕ್ಕಾಗಿಯೇ ಪುಟ್ಟ ವೇದಿಕೆ, ದ್ವನಿ, ಬೆಳಕು ಮತ್ತು ಆಸನ ವ್ಯವಸ್ಥೆಯನ್ನು ಮಾಡಲಾಗಿದ್ದು, 40 ರಿಂದ 50 ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ಸಾಹಿತ್ಯದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಬರಹಗಾರರಿಗೆ ಆದ್ಯತೆ ನೀಡಲಾಗಿದೆ. ಒಂದು ತಾಸು ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ - ಕಿರಿಯ ಕತೆಗಾರ, ಕವಿ, ಪ್ರಬಂದಕಾರ ಅಥವಾ ನಾಟಕಕಾರ ತನ್ನ ಕೃತಿಯ ಆಯ್ದ ಭಾಗವನ್ನು ವಾಚಿಸಿ, ಆಹ್ವಾನಿತರೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಎ. 7 ರಂದು ಪೂರ್ವಾಹ್ನ 10 ಕ್ಕೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್, ಸಾಹಿತ್ಯ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕೊಂಕಣಿಯ ಪ್ರಮುಖ ಸಮಕಾಲೀನ ಕತೆಗಾರ ಡಾ. ಮೆಲ್ವಿನ್ ಪಿಂಟೊ ನೀರುಡೆ ಆಯ್ದ ಸಣ್ಣಕತೆಗಳ ಭಾಗಗಳನ್ನು ವಾಚಿಸಿ, ಸಣ್ಣಕತೆ ಮತ್ತು ನಾನು ವಿಷಯದ ಮೇಲೆ ವಿಚಾರ ಮಂಡನೆ ಮಾಡಲಿದ್ದಾರೆ. ಪ್ರಸ್ತುತಿಯ ನಂತರ ಶೋತೃಗಳೊಂದಿಗೆ ಸಂವಾದ ನಡೆಯಲಿದೆ.
ಬೊಲ್ಕಾಂವ್ ಸಾಹಿತ್ಯ ಸರಣಿ ಕಾರ್ಯಕ್ರಮದಲ್ಲಿ ಕವಿತೆ, ಸಣ್ಣ ಕತೆ, ಕಾದಂಬರಿ, ಪ್ರಬಂದ, ಅನುವಾದ, ನಾಟಕ - ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೃಷಿ ಮಾಡಿದವರಿಗೆ ತಮ್ಮ ಕೃತಿ ಮತ್ತು ಅನುಭವ ಪ್ರಸ್ತುತಪಡಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.