ತೊಕ್ಕೊಟ್ಟು ಮಸೀದಿಯಲ್ಲಿ ‘ನನ್ನ ಅರಿವಿನ ಪ್ರವಾದಿ’ ಪುಸ್ತಕ ಬಿಡುಗಡೆ
ಉಳ್ಳಾಲ, ಸೆ.29: ಸಮಾನತೆಯ ಸಮಾಜದ ಶಿಲ್ಪಿಪ್ರವಾದಿ ಮುಹಮ್ಮದ್ (ಸ) ಅಭಿಯಾನದ ಪ್ರಯುಕ್ತ ತೊಕ್ಕೊಟ್ಟುವಿನ ಮಸ್ಜಿದ್ ಹುದಾದಲ್ಲಿ ಚಿಂತಕ ಯೋಗೇಶ್ ಮಾಸ್ಟರ್ ರಚಿಸಿದ ‘ನನ್ನ ಅರಿವಿನ ಪ್ರವಾದಿ’ ಪುಸ್ತಕವನ್ನು ಉದ್ಯಮಿ ಮುಹಮ್ಮದ್ ಜವಾದ್ ಶುಕ್ರವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಬೋಳಂಗಡಿ ಜುಮಾ ಮಸೀದಿಯ ಖತೀಬ್ ಮೌಲಾನ ಯಾಹ್ಯಾ ತಂಳ್ ಮದನಿ ‘ಇಸ್ಲಾಂ ಮತ್ತು ಪ್ರವಾದಿ (ಸ)ರ ಬಗ್ಗೆ ಸಮಾಜದಲ್ಲಿ ತಪ್ಪುಕಲ್ಪನೆಗಳನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ಸಹೋದರ ಸಮುದಾಯದ ಚಿಂತಕ ಯೋಗೇಶ್ ಮಾಸ್ಟರ್ ಬರೆದ ಈ ಕೃತಿಯು ಅಪಪ್ರಚಾರದ ಪೊಳ್ಳುತನವನ್ನು ಬಹಿರಂಗಪಡಿಸಲು ಸಮರ್ಪಕ ವಾಗಿದೆ. ಸೌಹಾರ್ದ ಬಯಸುವ ದೇಶವಾಸಿಗಳು ಇದರ ಪ್ರಯೋಜನ ಪಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಸೀದಿಯ ಅಧ್ಯಕ್ಷ ಯು.ಎಮ್. ಹಸನಬ್ಬ, ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಹೆಚ್. ಮಹ್ಮೂದ್, ಮಸೀದಿಯ ಸದಸ್ಯರಾದ ಯು.ಎ ಅಬ್ದುಲ್ ಖಾದರ್ ಉಪಸ್ಥಿತರಿದ್ದರು. ಸಾಲಿಡಾರಿಟಿ ದ.ಕ. ಜಿಲ್ಲಾಧ್ಯಕ್ಷ ನಿಝಾಮುದ್ದೀನ್ ಉಮರ್ ಕಾರ್ಯಕ್ರಮ ನಿರೂಪಿಸಿದರು.