'ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು' ಪುಸ್ತಕ ಬಿಡುಗಡೆ
ಮಂಗಳೂರು, ನ.2: ಮುದ್ದು ಮೂಡುಬೆಳ್ಳೆಯವರ 'ತುಳುನಾಡಿನ ಜನಪದ ವಾದ್ಯಗಳು ಮತ್ತು ಪಾರಂಪರಿಕ ವೃತ್ತಿಗಳು' ಕೃತಿ ಬಿಡುಗಡೆ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಜಾನಪದ ವಿದ್ವಾಂಸ ಡಾ.ಗಣನಾಥ ಶೆಟ್ಟಿ ಎಕ್ಕಾರು, ತುಳುನಾಡಿನ ಜನಪದ ಮತ್ತು ಸಂಸ್ಕೃತಿ ಜೊತೆಗಿನ ಸಂಬಂಧವನ್ನು ಸೂಕ್ಷ್ಮಅಧ್ಯಯನ ಹಾಗೂ ವಿಶ್ಲೇಷಣೆಯನ್ನು ಹೊಸ ಕೃತಿಯಲ್ಲಿ ಕಾಣಬಹುದು. ಇಂತಹ ಸೂಕ್ಷ್ಮ ಅಧ್ಯಯನ ಇನ್ನಷ್ಟು ನಡೆಯಬೇಕು ಎಂದರು.
ತುಳುನಾಡಿನ ಪ್ರತೀ ಆಚರಣೆಗಳಲ್ಲಿ ವಾದ್ಯಗಳ ಬಳಕೆ ಇದೆ. ಚರ್ಮವಾದ್ಯ, ಗಾಳಿವಾದ್ಯ, ಲೋಹ ವಾದ್ಯ ಹಾಗೂ ಇತರ ವಾದ್ಯಗಳ ವಸ್ತುನಿಷ್ಠ ಪರಿಚಯ ಇಲ್ಲಿದೆ. ಈ ಗಂಭೀರವಾದ ಅಧ್ಯಯನ ಈ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ಕೈಗೊಳ್ಳುವವರಿಗೆ ಕೈದೀವಿಗೆಯಾಗಿದೆ. ಇದೇ ರೀತಿ ತುಳುವರ ಪಾರಂಪರಿಕ ವೃತ್ತಿಗಳ ಅಧ್ಯಯನವೂ ಉಪಯುಕ್ತವಾಗಿದೆ. ತುಳು ಸಂಶೋಧನ ಕ್ಷೇತ್ರಕ್ಕೆ ಇದೊಂದು ಮಹತ್ವದ ಕೃತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಪರಿಚಯಿಸಿದ ಸಾಹಿತಿ ಡಾ.ಜ್ಯೋತಿ ಚೇಳಾರು ಮಾತನಾಡಿ, ಪಾರಂಪರಿಕ ಸಮುದಾಯಗಳ ಕುಲಮೂಲದ ಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ವಿಸ್ತಾರವಾದ ಅಧ್ಯಯನ ಮತ್ತು ದಾಖಲೀಕರಣ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಯನದಲ್ಲಿ ತೊಡಗುವವರಿಗೆ ಹೊಸ ಕೃತಿ ಆಕರ ಗ್ರಂಥವಾಗಲಿದೆ ಎಂದರು.
ಲೇಖಕ ಮುದ್ದು ಮೂಡುಬೆಳ್ಳೆ ಮಾತನಾಡಿ, ಸುಮಾರು 30 ವರ್ಷಗಳ ಹಿಂದೆ ಅಧ್ಯಯನ ನಡೆಸಿ ರಚಿಸಿದ ಬರಹವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೊದಲು ಪರಿಷ್ಕರಿಸಿ ಸ್ವಲ್ಪವಿಸ್ತರಿಸಲಾಗಿದೆ ಎಂದರು.
ಯುವ ವಾಹಿನಿಯ ಸಾಧು ಪೂಜಾರಿ ಮುಖ್ಯ ಅತಿಥಿಯಾಗಿದ್ದರು. ಆಕೃತಿ ಆಶಯ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ನಾಗೇಶ್ ಕಲ್ಲೂರು ಪ್ರಾಸ್ತಾವಿಕವಾಗಿ ಮಾತನಾಡಿದರು.