ಉಪ್ಪಿನಂಗಡಿ| ಪಾಸ್ ಇಲ್ಲವೆಂದು ವಿದ್ಯಾರ್ಥಿಯನ್ನು ಅರ್ಧದಲ್ಲೇ ಇಳಿಸಿದ ನಿರ್ವಾಹಕ; ಆರೋಪ
ಬಾಲಕನ ತಂದೆಯಿಂದ ಜಿಲ್ಲಾಧಿಕಾರಿಗೆ ದೂರು
ಸಾಂದರ್ಭಿಕ ಚಿತ್ರ
ಉಪ್ಪಿನಂಗಡಿ: ಇಲ್ಲಿನ ಖಾಸಗಿ ವಿದ್ಯಾ ಸಂಸ್ಥೆಯ ಹನ್ನೊಂದರ ಹರೆಯದ ವಿದ್ಯಾರ್ಥಿ ಮನೆಗೆ ತೆರಳುವ ಸಂದರ್ಭದಲ್ಲಿ ಬಸ್ ಪಾಸ್ ಹೊಂದಿರದ ಕಾರಣಕ್ಕೆ ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿಯನ್ನು ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆ ಬಗ್ಗೆ ಬಾಲಕನ ಹೆತ್ತವರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ.
ಉಪ್ಪಿನಂಗಡಿಯಿಂದ ಎಂದಿನಂತೆ ಕೊಣಾಲು ಗ್ರಾಮದಲ್ಲಿನ ನನ್ನ ಮನೆಗೆ ಹೋಗುವ ಸಲುವಾಗಿ ಸೆ.28ರಂದು ಸಂಜೆ 4.00 ಗಂಟೆ ಸುಮಾರಿಗೆ ಉಪ್ಪಿನಂಗಡಿ ಬಸ್ ನಿಲ್ದಾಣದಿಂದ ಹೊರಟ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕೆ ಎ19 ಎಫ್ 3276 ರನ್ನೇರಿದ್ದ ಈ ವಿದ್ಯಾರ್ಥಿಯು ಬಸ್ ನಿರ್ವಾಹಕ ಬಂದು ಬಸ್ ಪಾಸ್ ತೋರಿಸಲು ತಿಳಿಸಿದಾಗ , ಬಸ್ ಪಾಸ್ ತನ್ನ ಕಿಸೆಯಲ್ಲಿದೆ ಎಂದು ಭಾವಿಸಿ ಪಾಸಿಗಾಗಿ ಕಿಸೆಗೆ ಕೈ ಹಾಕಿದಾಗ ಬಸ್ ಪಾಸ್ ಇಲ್ಲದಿರುವುದು ವಿದ್ಯಾರ್ಥಿಯ ಗಮನಕ್ಕೆ ಬಂದಿದೆ. ಈ ವೇಳೆ ಬಸ್ ಪಾಸ್ ಕಳೆದುಕೊಂಡಿದ್ದೇನೆಂದು ಭಯಪಟ್ಟ ಬಾಲಕ ಬಸ್ ಪಾಸ್ ಇಲ್ಲದಿರುವುದರಿಂದ ಕಸಿವಿಸಿಗೊಂಡು ಕಂಗಾಲಾಗಿದ್ದ ವೇಳೆ, ಬಾಲಕನ ಮೇಲೆ ನಿರ್ದಯೆಯಿಂದ ವರ್ತಿಸಿದ ಬಸ್ ನಿರ್ವಾಹಕ ಆತನಲ್ಲಿ ಟಿಕೇಟ್ ಖರೀದಿಸಲು ಹಣವಿದೆಯೇ ಎಂದು ವಿಚಾರಿಸದೆ, ಪಾಸ್ ಇಲ್ಲದೆ ಬಸ್ಸಿನಲ್ಲಿ ಪ್ರಯಾಣಿಸಬಾರದೆಂದು ಆಜ್ಞಾಪಿಸಿ ಉಪ್ಪಿನಂಗಡಿ ಆತೂರು ಮಧ್ಯದ ರಸ್ತೆಯಲ್ಲಿ ಬಲವಂತವಾಗಿ ಆತನನ್ನು ಇಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆಯ ಬಗ್ಗೆ ಆತನ ತಂದೆ ಮಹಾಬಲ ಎಂಬವರು ದ.ಕ. ಜಿಲ್ಲಾಧಿಕಾರಿಯವರಿಗೆ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದು, ಈ ಘಟನೆಯಿಂದ ತನ್ನ ಮಗನಿಗೆ ಮಾನಸಿಕ ಆಘಾತವುಂಟಾಗಿದ್ದು, ಸಾರ್ವಜನಿಕವಾಗಿ ಬಸ್ಸಿನಿಂದ ಇಳಿಸಿ ಅವಮಾನಿಸಿದ ಘಟನೆಯಿಂದ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಾನೆ ಎಂದು ಆಪಾದಿಸಿದ್ದಾರೆ.