ಅಡಿಕೆ ಕಳ್ಳಸಾಗಾಣೆಯನ್ನು ಭೇದಿಸಿದ ಡಿಆರ್ಐ ಕಾರ್ಯಕ್ಕೆ ಕ್ಯಾಂಪ್ಕೊ ಶ್ಲಾಘನೆ
ಕಿಶೋರ್ ಕುಮಾರ್ ಕೊಡ್ಗಿ
ಮಂಗಳೂರು : ಅಡಿಕೆ ಕಳ್ಳಸಾಗಾಣೆಯನ್ನು ಭೇದಿಸಿದ ಆದಾಯ ಗುಪ್ತಚರ ನಿರ್ದೇಶನಾಲಯದ ಕಾರ್ಯಕ್ಕೆ ಕ್ಯಾಂಪ್ಕೊ ಶ್ಲಾಘನೆ ವ್ಯಕ್ತಪಡಿಸಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ಡ್ರೈಫ್ರುಟ್ಸ್(ಒಣ ಹಣ್ಣು)ಗಳ ಹೆಸರಿನಡಿಯಲ್ಲಿ ಮತ್ತು ಬೇರೆ ಬೇರೆ ರೂಪಗಳಲ್ಲಿ ವಿದೇಶಗಳಿಂದ ಕಳ್ಳಸಾಗಾಣೆಯ ಮೂಲಕ ವಿದೇಶಿ ಅಡಿಕೆ ನಮ್ಮ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು ದೇಶೀ ಅಡಿಕೆಯ ಸ್ಥಿರ ಧಾರಣೆಗೆ ಬೆದರಿಕೆಯನ್ನು ಉಂಟುಮಾಡುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಕ್ಯಾಂಪ್ಕೊ ಸೂಕ್ತ ಮಾಹಿತಿಗಳನ್ನು ಕಾಲ ಕಾಲಕ್ಕೆ ನೀಡುತ್ತಾ ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸಿತ್ತು ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿ ಅಡಿಕೆ ಕಳ್ಳಸಾಗಾಣೆಯನ್ನು ತಡೆಯಲು ಸಂಬಂಧ ಸೂಕ್ತ ಕಾನೂನಾತ್ಮಕ ಕ್ರಮ ಜರುಗಿಸುವಂತೆ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮನವಿ ಮಾಡಿದ್ದಾರೆ.
ಕ್ಯಾಂಪ್ಕೊದ ಮನವಿಗೆ ಕೇಂದ್ರ ಸರಕಾರ ಸಕರಾತ್ಮಕ ಸ್ಪಂದನೆ ನೀಡಿದೆ.ಕೇಂದ್ರದ ಕೃಷಿ,ಕಂದಾಯ , ವಾಣಿಜ್ಯ ಹಾಗೂ ಹಣಕಾಸು ಸಚಿವರುಗಳು ಆಯಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನಗಳನ್ನು ನೀಡಿರು ತ್ತಾರೆ.ಕೇಂದ್ರದ ಕ್ರಮಕ್ಕೆ ಕ್ಯಾಂಪ್ಕೊ ಶ್ಲಾಘನೆ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರದ ನಿರ್ದೇಶನದಂತೆ ಅದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ಐ),ಕಟ್ಟುನಿಟ್ಟಾಗಿ ತಪಾಸನೆ ನಡೆಸುತ್ತಿದೆ.ಪರಿಣಾಮವಾಗಿ ಡ್ರೈಫ್ರುಟ್ಸ್ ಹೆಸರಿನಲ್ಲಿ ಬರುವ ವಿದೇಶಿ ಅಡಿಕೆಯನ್ನು ತಡೆಹಿಡಿದು ತಪಾಸನೆ ನಡೆಸಿ ವಶಪಡಿಸಿಕೊಳ್ಳುತ್ತಿರುವುದರ ಬಗ್ಗೆ ಕ್ಯಾಂಪ್ಕೊ ಸಂತಸ ವ್ಯಕ್ತಪಡಿಸುತ್ತದೆ.
ಇತ್ತೀಚೆಗೆ ಮುಂಬೈನ ಜೆಎನ್ಪಿಟಿ ಬಂದರಿನಲ್ಲಿ ಸುಟ್ಟ ಸುಣ್ಣದ ಉಂಡೆಯ ಹೆಸರಿನಲ್ಲಿ ಕಳ್ಳಸಾಗಣೆ ಮಾಡಿದ ಅಡಿಕೆಯನ್ನು ಡಿಆರ್ಐ ಅಧಿಕಾರಿಗಳು ವಶಪಡಿಸುವುದರ ಮೂಲಕ ಅಡಿಕೆ ಬೆಳೆಗಾರರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ವಿದೇಶದಿಂದ ಬೇರೆ ಬೇರೆ ಅಹಾರ ಪದಾರ್ಥಗಳ ಹೆಸರಿನಲ್ಲಿ ಆಮದು ಮಾಡುವ ಅಡಿಕೆಯನ್ನು ತಡೆದು ವಶಪಡಿಸಿಕೊಳ್ಳಲು ಕೇಂದ್ರದ
ನಿರ್ದೇಶನವನ್ನು ಕಟ್ಟನಿಟ್ಟಾಗಿ ಜಾರಿಗೆ ತಂದಿರುವುದರ ಕಾರಣ, ಅಡಿಕೆಯ ಕಳ್ಳಸಾಗಾಣಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.ಇದರಿಂದ ಅಡಿಕೆಯ ಧಾರಣೆಯಲ್ಲಿ ಸ್ಥಿರತೆ ಕಾಣಲು ಸಾಧ್ಯವಾಗಿದೆ ಎಂದು ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.