ದ.ಕ. ಜಿಲ್ಲಾ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ| ಷರತ್ತು ಉಲ್ಲಂಘನೆ, ವಾಹನ ಸಂಚಾರಕ್ಕೆ ಅಡ್ಡಿ ಆರೋಪದಲ್ಲಿ ಪ್ರಕರಣ ದಾಖಲು
ಮಂಗಳೂರು: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಷರತ್ತುಗಳನ್ನು ಉಲ್ಲಂಘಿಸಿ, ವಾಹನ ಸಂಚಾರಕ್ಕೆ ಮತ್ತು ಜನಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಅಂಬೇಡ್ಕರ್ ಸರ್ಕಲ್‌ನಿಂದ ಮಿನಿವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ಹಾಗೂ ಮಿನಿ ವಿಧಾನ ಸೌಧದ ಎದುರು ಆಯೋಜಿಸಿದ್ದ ಪ್ರತಿಭಟನೆಯನ್ನು ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.
ಪ್ರತಿಭಟನಾ ಮೆರವಣಿಗೆಯು ಬೆಳಗ್ಗೆ 10 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಮಂಗಳೂರು ನಗರ ಕ್ಲಾಕ್ ಟವರ್ ಬಳಿಯ ಮಿನಿ ವಿಧಾನ ಸೌಧದ ಎದುರು 10.45 ಗಂಟೆಗೆ ಕೊನೆಗೊಂಡಿತ್ತು. ಮಿನಿವಿಧಾನ ಸೌಧದ ಎದುರು ಪ್ರತಿಭಟನಾಕಾರರು 11 ಗಂಟೆಯ ಸುಮಾರಿಗೆ ರಸ್ತೆಗಿಳಿದು, ರಸ್ತೆ ತಡೆಯನ್ನುಂಟು ಮಾಡಿ ಪ್ರತಿಭಟಿಸಿದ್ದಾರೆ. ಇದರ ಪರಿಣಾಮವಾಗಿ ಪ್ರತಿಭಟನಾ ಸ್ಥಳದ ಬಳಿ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಮತ್ತು ಜನ ಸಂಚಾರಕ್ಕೆ ತಡೆಯುಂಟಾಗಿರುತ್ತದೆ. ಇದೇ ವೇಳೆ ಹಂಪನಕಟ್ಟೆ ಕಡೆಯಿಂದಾಗಿ ಬಂದ ಆ್ಯಂಬುಲೆನ್ಸ್ ವಾಹನದ ಸಂಚಾರಕ್ಕೆ ತಡೆಯುಂಟಾಗಿದೆ. ಪ್ರತಿಭಟನೆಗೆ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿ , ರಸ್ತೆ ತಡೆ ನಿರ್ಮಿಸಿ ವಾಹನಗಳ ಮತ್ತು ಜನರ ಸಂಚಾರಕ್ಕೆ ಅಡ್ಡಪಡಿಸಡಿರುವ ಆರೋಪದಲ್ಲಿ ಆಯೋಜಕರು ಮತ್ತು ಇತರರ ವಿರುದ್ಧ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಅ.ಕ್ರ. 230/2024 ಕಲಂ: 126 (2), 270, 285, 292 ಬಿಎನ್‌ಎಸ್ 2023 ಮತ್ತು ಕಲಂ 103 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.