ಹಬ್ಬಗಳ ಆಚರಣೆ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪೂರಕವಾಗಬೇಕು: ಯು.ಟಿ.ಖಾದರ್
ಕೊಣಾಜೆ: ಶ್ರೀ ಕೃಷ್ಣ ಜನ್ಮಾಷ್ಠಮಿಯು ನಾಡಿನ ಮಹತ್ವದ ಹಬ್ಬವಾಗಿದ್ದು, ಕೃಷ್ಣನ ತತ್ವಾದರ್ಶಗಳು ಸಮಾಜಕ್ಕೆ ದಾರಿ ದೀಪವಾಗಿದೆ. ಇಂತಹ ಆಚರಣೆಗಳನ್ನು ಸಮಾಜದ ಎಲ್ಲರೂ ಜತೆಗೂಡಿ ಆಚರಿಸಿದರೆ ಸಾಮರಸ್ಯದ ಸಮಾಜ ನಿರ್ಮಾಣ ಸಾಧ್ಯ ಎಂದು ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ಅವರು ಮಂಗಳಾ ಗ್ರಾಮೀಣ ಯುವಕ ಸಂಘ (ರಿ) ಕೊಣಾಜೆ, ನಾಗಬ್ರಹ್ಮ ಸ್ವಸಹಾಯ ಸಂಘ ಕೊಣಾಜೆ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಬುಧವಾರ ನಡೆದ ಶ್ರೀ ಜನ್ಮಾಷ್ಠಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯೆನೆಪೋಯ ಆಸ್ಪತ್ರೆಯ ವೈದ್ಯರಾದ ಅಭಿಷೇಕ್ ಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಧರ್ಮ ದವರನ್ನು ಒಟ್ಟು ಸೇರಿಸಿ ಆಚರಿಸುವ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಮಹತ್ವಪೂರ್ಣವಾದುದು ಎಂದರು. ಕೊಣಾಜೆ ಯಲ್ಲಿ ಎಲ್ಲಾ ಧರ್ಮದವರು ಒಟ್ಟು ಸೇರಿ ಮಾತನಾಡುವ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆಯು ಮಾದರಿಯಾಗಿದ್ದು, ಇಡೀ ದೇಶದಲ್ಲಿ ಇಂತಹ ವಾತಾವರಣ ಸೃಷ್ಟಿಯಾಗಬೇಕು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಸಾದ್ ರೈ ಕಲ್ಲಿಮಾರ್ ಅವರು ವಹಿಸಿ ಮಾತನಾಡಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಮಂಗಳೂರು ವಿವಿ ಪ್ರಾಧ್ಯಾಪಕ ಡಾ.ಮಂಜಯ್ಯ, ಹಾಜಿ ಇಬ್ರಾಹಿಂ ಕೋಡಿಜಾಲ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, ಆಲ್ವಿನ್ ,ಡಿಸೋಜ, ಶಿಕ್ಷಕರಾದ ಜಾನ್ ಫೆರ್ನಾಂಡಿಸ್ , ನಿವೃತ್ತ ಲೆಕ್ಕಾಧಿಕಾರಿ ಸುರೇಂದ್ರ ರೈ , ಪಂಚಾಯತಿ ಸದಸ್ಯರು ದೇವಣ್ಣ ಶೆಟ್ಟಿ, ಪಂಚಾಯಿತಿ ಮಾಜಿ ಅಧ್ಯಕ್ಷ ಶೌಕತ್ ಆಲಿ, ಎಪಿಎಂಸಿ ಮಾಜಿ ಸದಸ್ಯೆ ಮುತ್ತಕ್ಕ, ನಿವೃತ್ತ ಶಿಕ್ಷಕ ಜಯಪ್ರಸಾದ್ , ಅಚ್ಯುತಗಟ್ಟಿ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಇಕ್ಬಾಲ್ ಸಾಮಾಣಿಗೆ, ಹಬೀಬ್ ಕೊಣಾಜೆ,ಮನ್ಸೂರ್ ಉಳ್ಳಾಲ್, ಅಬ್ದುಲ್ ರಹಿಮಾನ್ ಕೋಡಿಜಾಲ್,ಶಶಿಕಲಾ ಬೊಳ್ಳಿಕುಮೇರ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿನಿ ಫಾತಿಮತ್ ನಿಶಾ, ಭುವನ್, ಕುಮಾರಿ ಮೋಕ್ಷ, ಸಮಾಜ ಸೇವಕಿ ಶೋಭಾ, ಸಮಾಜ ಸೇವಕರಾದ ಆಲ್ವಿನ್ ಡಿಸೋಜ, ಇಬ್ರಾಹಿಂ ಮೂಸ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕೃಷ್ಣ ವೇಷ ಹಾಗೂ ಇತರ ಸ್ಪರ್ಧಾ ಕೂಟಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಅವರನ್ನು ಗೌರವಿಸಲಾಯಿತು.
ಕೊಣಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಅಚ್ಯುತ ಗಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳಾ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ.ಸ್ವಾಗತಿಸಿದರು. ಶಿಕ್ಷಕಿ ಸುರೇಖಾ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.