ಎ.15 ರಂದು ಸಿಇಟಿ ಕನ್ನಡ ಭಾಷಾ ಪರೀಕ್ಷೆ; ʼಗುಡ್ಫ್ರೈಡೆʼ ದಿನ ನಿಗದಿಯಾಗಿದ್ದ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ
ಮಂಗಳೂರು: ಗುಡ್ ಫ್ರೈಡೆ ದಿನ(ಎ.18)ದಂದು ನಿಗದಿಯಾಗಿದ್ದ ಸಿಇಟಿ ಕನ್ನಡ ಭಾಷಾಪರೀಕ್ಷೆಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಎ.15ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುವುದು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ವಿಧಾನ ಪರಿಷತ್ನಲ್ಲಿ ಶೂನ್ಯ ವೇಳೆಯಲ್ಲಿ ಎತ್ತಿರುವ ಪ್ರಶ್ನೆಗೆ ಉತ್ತರ ಒದಗಿಸಿದ್ದಾರೆ.
ಕರ್ಣಾಟಕದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನಿರ್ಧರಿತವಾಗಿರುವ ಸಿಸಿಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಎ.16, 17, 18 ರಂದು ನಡೆಸುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ನಿರ್ಧರಿಸಿದ್ದು, ಈ ಮೂರು ದಿನಗಳು ಕ್ರೈಸ್ತ ಸಮುದಾಯಕ್ಕೆ ಧಾರ್ಮಿಕವಾಗಿ ಪವಿತ್ರ ದಿನಗಳಾಗಿರುತ್ತದೆ. ಮಾ.18ರಂದು ಗುಡ್ಫ್ರೈಡೆ ಆಗಿರುತ್ತದೆ. ಅಲ್ಲದೆ ಈವರೆಗೆ ಸಿಇಟಿ ಎಲ್ಲ ಪರೀಕ್ಷೆಗಳನ್ನು ಶನಿವಾರ ಮತ್ತು ಆದಿತ್ಯವಾರ ನಡೆಸಲಾಗಿತ್ತು ಎಂದು ಐವನ್ ಸರಕಾರದ ಗಮನ ಸೆಳೆದಿದ್ದರು.
ಎ.18ರಂದು ಗುಡ್ಫ್ರೈಡೆ ದಿನದಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಗೆ 2,537 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 115 ಮಂದಿ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಾಗಿದ್ದಾರೆ.
ಎ.16ರಂದು ನಿಗದಿಯಾಗಿದ್ದ ಭೌತಶಾಸ್ತ್ರ 3,30, 530, ರಸಾಯನಶಾಸ್ತ್ರ 3,30,350, ಎ.17ರಂದು ಗಣಿತಶಾಸ್ತ್ರ 3,30, 530, ಜೀವಶಾಸ್ತ್ರ ಪರೀಕ್ಷೆಗೆ 2,62,589 , ಎ.18ರಂದು ಕನ್ನಡ ಭಾಷಾ ಪರೀಕ್ಷೆಗೆ 2,537 ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವರು ಸದನದಲ್ಲಿ ತಿಳಿಸಿದ್ದಾರೆ.