ಬಿಜೆಪಿಯಿಂದ ಮಲ್ಲಿಕಾರ್ಜುನ ಖರ್ಗೆ ಚಾರಿತ್ರ್ಯ ವಧೆ: ಪದ್ಮಪ್ರಸಾದ್
ಮಂಗಳೂರು, ಅ.17: ರಾಜ್ಯ ಸಭಾ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ನಾಯಕರು ವ್ಯಥಾ ಆರೋಪ ಮಾಡಿ ಅವರ ಚಾರಿತ್ರ್ಯವಧೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್ ಆರೋಪಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗುತ್ತಿದೆ. ಅದನ್ನು ಎದುರಿಸಲಾಗಿದೆ ತಮ್ಮ ಮುಖಂಡರ ಮೂಲಕ ಬಿಜೆಪಿಯು ವಾಮಮಾರ್ಗದಲ್ಲಿ ಖರ್ಗೆ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ಶೈಕ್ಷಣಿಕ ಉದ್ದೇಶಕ್ಕಾಗಿ ಸಿದ್ಧಾರ್ಥ ವಿಹಾರ ಟ್ರಸ್ಟ್ ಜಮೀನು ಹಂಚಿಕೆಯಾಗಿತ್ತು. ರಾಹುಲ್, ಖರ್ಗೆ ಇದರ ಟ್ರಸ್ಟಿಯಾಗಿದ್ದರು. ತನ್ನ ಘನತೆಗೆ ಧಕ್ಕೆ ಬರುತ್ತದೆ ಎಂಬ ಉದ್ದೇಶಕ್ಕೆ ಈ ಜಮೀನನ್ನು ಕೆಐಎಡಿಬಿಗೆ ಮತ್ತೆ ಹಿಂದಿರುಗಿಸಿದ್ದಾರೆ. ಆದರೆ, ಛಲವಾದಿ ನಾರಾಯಣ ಸ್ವಾಮಿ ಅವರ ಹೆಸರಿನಲ್ಲಿಯೂ ಇದೇ ರೀತಿ ಐದು ಎಕರೆ ಜಮೀನು ಹಂಚಿಕೆಯಾಗಿದೆ. ಅದರಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಖರ್ಗೆ ಬಗ್ಗೆ ಆರೋಪ ಮಾಡುವ ಛಲವಾದಿಯವರು ತತ್ಕ್ಷಣ ಜಮೀನು ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.
ಛಲವಾದಿಯವರು ಟೀಕೆ ಮಾಡುವಾಗ ತಾನು ಮೊದಲು ಹೇಗಿದ್ದೆ ಎಂಬ ಬಗ್ಗೆ ತಿಳಿದುಕೊಳ್ಳಲಿ. ರಾಜಕೀಯಕ್ಕೆ ಬರುವಾಗ ಯಾರ ಹಿಂದೆ ಓಡಾಡುತ್ತಿದ್ದರು, ಕಾಂಗೆಸ್ ಸೇರಿ ಖರ್ಗೆ ಹಿಂದೆ ಓಡಾಡುತಾ ಅವರ ಮನೆಯ ಗೇಟ್ ಕೀಪರ್ ತರಹ ಇದ್ದರು. ಇದೀಗ ಅವರ ವಿರುದ್ಧವೇ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 43 ಪ್ರಕರಣ ವಾಪಾಸ್ ಪಡೆಯಲು ಈಗಾಗಲೇ ಸಂಪುಟ ನಿರ್ಧಾರ ಮಾಡಿದೆ. ಇದರಲ್ಲಿ ಬಿಜೆಪಿ ಮುಖಂಡರ ಪ್ರಕರಣವೂ ಇದೆ. 43 ಪ್ರಕರಣಗಳ ಪೈಕಿ ಕೇವಲ ಹುಬ್ಬಳ್ಳಿ ಗಲಭೆ ಪ್ರಕರಣವನ್ನಿಟ್ಟು ಬಿಜೆಪಿಯು ರಾಜಕೀಯ ಮಾಡುತ್ತಿದೆ. ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗ 385 ಮೊಕದ್ದಮೆಯನ್ನು ಹಿಂಪಡೆದಿತ್ತು. ಅದರಲ್ಲೂ ಪಿಎಫ್ಐ, ಎಸ್ಡಿಪಿಐ, ಹಿಂದೂ ಸಂಘಟನೆಗಳ ಪ್ರಕರಣ ಇತ್ತು. ಈಗ ಧರ್ಮ, ಭಾವನಾತ್ಮಕ ವಿಚಾರ ಮುಂದಿಟ್ಟು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನೀರಜ್ ಪಾಲ್, ಆಲ್ವಿನ್ ಡಿಸೋಜ ಇದ್ದರು.