ಸಿಎಂ ಸಿದ್ದರಾಮಯ್ಯ ರಾಜಕೀಯ ಕಾರ್ಯದರ್ಶಿ ನಾಸೀರ್ ಹುಸೇನ್ ಉಳ್ಳಾಲ ದರ್ಗಾ ಭೇಟಿ
ಉಳ್ಳಾಲ: ಉಳ್ಳಾಲ ದರ್ಗಾ ವ್ಯಾಪ್ತಿಯಲ್ಲಿ ವಸತಿ ಕಟ್ಟಡ ನಿರ್ಮಾಣ ಸಹಿತ ಯೋಜನೆಗಳಿಗೆ ಸೂಕ್ತ ಸ್ಪಂದನ, ಸಹಕಾರ ನೀಡಲು ಪ್ರಯತ್ನಿಸುತ್ತೇನೆ, ಶಾಸಕ ಖಾದರ್ ಅವರ ಕಚೇರಿಯಲ್ಲಿಯೇ ಮೀಟಿಂಗ್ ಕರೆದು ಈ ಬಗ್ಗೆ ಅಭಿಪ್ರಾಯ ಮಾಡೋಣ. ಉರೂಸ್ ಸಂದರ್ಭ ಬರಬೇಕಿದ್ದ ಹಣವನ್ನು ಹಣಕಾಸು ವಿಭಾಗದಲ್ಲಿ ಮಾತಾಡಿ ಆದಷ್ಟು ಬೇಗ ನೀಡುವಲ್ಲಿ ಸಹಕರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಾಸೀರ್ ಹುಸೇನ್ ಹೇಳಿದರು.
ಅವರು ಶುಕ್ರವಾರ ದರ್ಗಾ ಭೇಟಿ ನೀಡಿ, ಝಿಯಾರತ್ ನಡೆಸಿದ ಬಳಿಕ ಮಾತನಾಡಿದರು.
ದರ್ಗಾ ಅಧ್ಯಕ್ಷ ಹಾಜಿ ಹನೀಫ್ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಮುಖ್ಯ ಮಂತ್ರಿಯವರನ್ನು ಒಂದು ವಾರ ಮೊದಲು ಭೇಟಿ ಮಾಡಿದ್ದೆವು, ದಕ್ಷಿಣ ಭಾರತ ಅಜ್ಮೀರ್ ಎಂದೇ ಹೆಸರುವಾಸಿಯಾದ ಉಳ್ಳಾಲ ದರ್ಗಾ, ಇಲ್ಲಿ ಬರುವ ಪ್ರತಿಯೊಂದು ಹಣವೂ ಸಮಾಜಕ್ಕಾಗಿ ಅಭಿವೃದ್ಧಿಗಾಗಿ ಖರ್ಚಾಗುತ್ತದೆ, ಇಲ್ಲಿ ಎಲ್ಲಾ ಜಾತಿ ಧರ್ಮದವರು ಕಷ್ಟ ಎಂದು ಬಂದರೆ ಅವರಿಗೆ ನಾವು ಘತ ಕಾಲದಿಂದಲೂ ಸಹಾಯ ಮಾಡುತ್ತಾ ಬಂದಿರುತ್ತೇವೆ. ನಮ್ಮ ಕಮಿಟಿಯು ದ.ಕ ಜಿಲ್ಲೆಯ ವಕ್ಫ್ ಸಮಿತಿಯಿಂದ ಎಲೆಕ್ಷನ್ ಆಗಿ ಬಂದ ಕಮಿಟಿ ಆಗಿದೆ, ನಮ್ಮ ಸಮಾಜ ನಮ್ಮ ಸಮುದಾಯದ ಅಭಿವೃದ್ಧಿಗೆ ತಮ್ಮಲ್ಲಿ ಮನವಿ ನೀಡಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಯು.ಟಿ. ಇಫ್ತಿಕರ್ ಅಲಿ, ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್ವೇ, ಹಸೈನಾರ್ ಕೋಟೆಪುರ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಕೊಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿಗಳಾದ ಇಸಾಕ್ ಮೇಲಂಗಡಿ, ಮುಸ್ತಫ ಮದನಿ ನಗರ, ಅಡಿಟರ್ ಫಾರೂಕ್ ಕಲ್ಲಾಪು ಉಪಸ್ಥಿತರಿದ್ದರು.