ಬಟ್ಟಪಾಡಿಯ ಕಡಲ್ಕೊರೆತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ, ಪರಿಶೀಲನೆ
ಉಳ್ಳಾಲ: ಉಡುಪಿ, ಕಾರವಾರ ಹಾಗೂ ದ.ಕ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಮುದ್ರದ ಅಲೆಗಳ ಬಿರುಸಿನಿಂದಾಗಿ ಅಪಾರ ಹಾನಿಯುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಅವರು ಮಂಗಳವಾರ ಸಂಜೆ ಉಳ್ಳಾಲ ತಾಲೂಕಿನ ಬಟ್ಟಪಾಡಿಯ ಕಡಲ್ಕೊರೆತ ಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯರೊಂದಿಗೆ ಮಾತನಾಡಿದರು.
ನೀರು ಹೆಚ್ಚಾಗುವುದು, ಕಡಿಮೆಯಾಗುವುದು ಕಡಲಿನ ಬಳಿ ಸಮಸ್ಯೆ ಇರುತ್ತದೆ. ಪ್ರತಿ ಊರಿನಲ್ಲೂ ಇಂತಹ ಸಮಸ್ಯೆ ಜಾಸ್ತಿ ಇವೆ. ಬಟ್ಟಪಾಡಿಯಲ್ಲಿ ಮನೆಗಳಿಗೆ ಹಾನಿಯಾಗಿವೆ . ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು, ಉಪಸ್ಥಿತರಿದ್ದರು.
ಸ್ಥಳೀಯರ ಆಕ್ರೋಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಪರಿಶೀಲನೆ ನಡೆಸಿ ಹೋದರು.ಆದರೆ ಈ ಸಂದರ್ಭದಲ್ಲಿ ಕಡಲ್ಕೊರೆತ ದಿಂದ ತೊಂದರೆ ಗೊಳಗಾದ ನಮಗೆ ಸಮಸ್ಯೆ ಗಳ ಬಗ್ಗೆ ಹೇಳಲು ಅವಕಾಶ ಕೊಟ್ಟಿಲ್ಲ. ನಮ್ಮ ಅಹವಾಲು ಕೇಳದೇ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಬಾರಿ ಸಮಸ್ಯೆ ಬಗ್ಗೆ ಹೇಳಿದಾಗ ಈಗ ನಮ್ಮ ಸರ್ಕಾರ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪರಿಹಾರ ಮಾಡುತ್ತೇವೆ ಎಂದು ಹೇಳಿದ್ದೀರಿ. ಈಬಾರಿ ಸರ್ಕಾರ ಇದೆ. ಸಮಸ್ಯೆಗಳಿಗೆ ಪರಿಹಾರ ಮಾಡಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನೇ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಅವರು ನಿಮ್ಮ ನೋವು ನಮಗೆ ಅರ್ಥವಾಗಿದೆ. ಸಮಸ್ಯೆ ಗಳಿಗೆ ಶೀಘ್ರ ಪರಿಹಾರ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿ ಆಕ್ರೋಶಿತರನ್ನು ಸಮಾಧಾನ ಪಡಿಸಿದರು.