ಕಮ್ಯುನಿಸ್ಟ್ ನಾಯಕರು ಸಿದ್ಧಾಂತಕ್ಕೆ ಬದ್ಧರಾಗಿದ್ದರು: ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ
‘ಪಿ.ಎಂ. ನಾರಾಯಣಮೂರ್ತಿ ನೂರರ ನೆನಪು’ ಕಾರ್ಯಕ್ರಮ
ಮಂಗಳೂರು, ನ.5: ದೇಶದಲ್ಲಿ ಚಳುವಳಿಗಳನ್ನು ರೂಪಿಸಿದ್ದ ಕಮ್ಯುನಿಸ್ಟ್ ನಾಯಕರು ಎಂದೂ ಸಂಪತ್ತಿನ ಹಿಂದೆ ಬಿದ್ದವರಲ್ಲ. ತಮಗಾಗಿ, ಕುಟುಂಬದ ಸದಸ್ಯರಾಗಿ ಏನನ್ನೂ ಮಾಡಲಿಲ್ಲ. ಬದಲಾಗಿ ರೈತರು, ಕಾರ್ಮಿಕರ ಹಿತಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟಿದ್ದರು. ಅಷ್ಟೇ ಅಲ್ಲ, ಕೊನೆಯುಸಿರು ಇರುವವರೆಗೂ ಸದಾ ಸಿದ್ಧಾಂತಕ್ಕೆ ಬದ್ಧರಾಗಿದ್ದರು ಎಂದು ಹಿರಿಯ ಲೇಖಕ, ಸಾಮಾಜಿಕ ಹೋರಾಟಗಾರ, ವೈದ್ಯ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ ಅಭಿಪ್ರಾಯಪಟ್ಟರು.
ಸಿಪಿಐ, ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಗಳ ಜಂಟಿ ಆಶ್ರಯದಲ್ಲಿ ನಗರದ ಗೂಡ್ಸ್‌ಶೆಡ್ ರಸ್ತೆಯಲ್ಲಿರುವ ಸಿಪಿಐ ಪಕ್ಷದ ಜಿಲ್ಲಾ ಕಚೇರಿ-ಕಾ.ಬಿ.ವಿ. ಕಕ್ಕಿಲ್ಲಾಯ ಭವನದ ಕಾ.ಸಿಂಪ್ಸನ್ ಸೋನ್ಸ್ ಸಭಾಂಗಣದಲ್ಲಿ ರವಿವಾರ ನಡೆದ ‘ಕಾ.ಪಿ.ಎಂ. ನಾರಾಯಣಮೂರ್ತಿ ನೂರರ ನೆನಪು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಮ್ಯುನಿಸ್ಟ್ ಪಕ್ಷದ ಬಹುತೇಕ ನಾಯಕರು ಶ್ರೀಮಂತ, ವಿದ್ಯಾವಂತ, ಮೇಲ್ವರ್ಗದ ಕುಟುಂಬದವರು ಎಂಬುದು ಗಮನಾರ್ಹ. ವಿದ್ಯಾವಂತ ಕುಟುಂಬದಲ್ಲಿ ಹುಟ್ಟಿದ ನಾರಾಯಣಮೂರ್ತಿ ಉಪನ್ಯಾಸಕ-ನ್ಯಾಯವಾದಿ ವೃತ್ತಿ ಮುಂದುವರಿಸಬಹುದಿತ್ತು. ಆದರೆ ಅವರು ಕಾರ್ಮಿಕರ ಪರವಾಗಿ ಕೆಲಸ ಮಾಡಿದರು. ಇಂದು ಅವರು ಇದ್ದಿದ್ದರೆ ಕಾರ್ಮಿಕರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದ ಡಾ. ಬಿ. ಶ್ರೀನಿವಾಸ ಕಕ್ಕಿಲ್ಲಾಯ, ಕಮ್ಯುನಿಸ್ಟ್ ಸಿದ್ಧಾಂತದ ಮಕ್ಕಳು ಪ್ರತಿಗಾಮಿಗಳಾಗಿಲ್ಲ ಎಂಬುದನ್ನು ಅರಿತುಕೊಳ್ಳಬೇಕಿದೆ. ಆದರೆ, ವಾರದ ದುಡಿಮೆಯ ಅವಧಿಯನ್ನು 70 ಗಂಟೆಗೆ ಏರಿಸಬೇಕು ಎಂಬ ಉದ್ಯಮಿಯ ಹೇಳಿಕೆಯ ವಿರುದ್ಧ ಇನ್ನೂ ಕಾರ್ಮಿಕ ವರ್ಗದಿಂದ ಗಟ್ಟಿಧ್ವನಿ ಮೊಳಗಿಲ್ಲ. ಇದರಿಂದ ನಾರಾಯಣಮೂರ್ತಿ ಅಂತಹವರ ಚಿಂತನೆಯಿಂದ ಯುವ ಪೀಳಿಗೆ ವಿಮುಖರಾಗುತ್ತಿದ್ದಾರೆಯೋ ಎಂಬ ಆತಂಕ ಕಾಡುತ್ತಿವೆ ಎಂದು ಹೇಳಿದರು.
ಲೇಖಕ, ಹೊಸತು ಪತ್ರಿಕೆಯ ಸಂಪಾದಕ ಡಾ. ಸಿದ್ದನಗೌಡ ಪಾಟೀಲ್ ಮಾತನಾಡಿ ವಿದ್ಯಾರ್ಥಿ ಚಳುವಳಿಯ ಮೂಲಕ ಹೊರ ಹೊಮ್ಮಿದ ನಾರಾಯಣ ಮೂರ್ತಿ ಕೇವಲ ಕಾರ್ಮಿಕ ವರ್ಗದ ನಾಯಕರಾಗದೆ ಜಿಲ್ಲೆಯಲ್ಲಿ ಸಾಮಾಜಿಕ ಚಳುವಳಿಯನ್ನೂ ಹುಟ್ಟು ಹಾಕಿದ್ದರು. ದುಡಿಯುವ ವರ್ಗದ ಸಂಸ್ಕೃತಿಯನ್ನೂ ಬಿಂಬಿಸಿದ್ದರು. ಅವರ ಚಿಂತನೆಯನ್ನು ಬದುಕಿನಲ್ಲಿ ಅಳವಡಿಸುವ ಮೂಲಕ ಅವರನ್ನು ಜೀವಂತವಾಗಿಡಲು ಪ್ರಯತ್ನಿಸಬೇಕು ಎಂದರು.
ದ.ಕ.ಜಿಲ್ಲೆಯು ಜಾತಿ-ಕೋಮುವೈಷಮ್ಯದ ನಾಡಾಗಿರಲಿಲ್ಲ. ಸೌಹಾರ್ದದ ಬೀಡಾಗಿತ್ತು. ಧರ್ಮಗಳ ಸಂಘರ್ಷದಿಂದ ಯಾರೂ ಕೂಡ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬ್ರಿಟಿಷರ ಕಾಲದಲ್ಲಿ ಕಾರ್ಮಿಕರಿಗಾಗಿ ಕನಿಷ್ಟ ಕಾನೂನುಗಳಿದ್ದವು. ಆದರೆ ಹಾಲಿ ಕೇಂದ್ರ ಸರಕಾರವು ರೈತ-ಕಾರ್ಮಿಕ ಕಾನೂನುಗಳನ್ನು ಕಿತ್ತುಕೊಳ್ಳುತ್ತಿವೆ. ಇದರ ವಿರುದ್ಧ ಯುವ ಸಮೂಹವನ್ನು ಜಾಗೃತಗೊಳಿಸಬೇಕಿದೆ ಎಂದು ಡಾ. ಸಿದ್ದನಗೌಡ ಪಾಟೀಲ್ ಹೇಳಿದರು.
ಪ್ರಕಾಶಕ ಕಲ್ಲೂರು ನಾಗೇಶ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ನೆನಪಿನ ನುಡಿಗಳನ್ನಾಡಿದರು. ಎಐಟಿಯುಸಿ ದ.ಕ.ಜಿಲ್ಲಾಧ್ಯಕ್ಷ ಹೆಚ್.ವಿ.ರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಅವರ ಪುತ್ರಿಯರಾದ ಸತ್ಯಮೂರ್ತಿ, ಸೀತಾ ಮೂರ್ತಿ, ಅಳಿಯ ಪ್ರಭಾಕರ ರಾವ್, ಪಕ್ಷದ ಜಿಲ್ಲಾ ನಾಯಕರಾದ ವಿ.ಕುಕ್ಯಾನ್, ಕರುಣಾಕರ ಮಾರಿಪಳ್ಳ, ಶಶಿಕಲಾ ಉಡುಪಿ, ಭಾರತಿ ಪ್ರಶಾಂತ್, ಸುಲೋಚನಾ ಕವತ್ತಾರು, ಜೆ. ಪ್ರಭಾಕರ ರಾವ್, ಆರ್.ಡಿ.ಸೋನ್ಸ್, ತಿಮ್ಮಪ್ಪ ಕಾವೂರು, ಕೃಷ್ಣಪ್ಪ ಪಿಲಿಕುಳ, ಸುಧಾಕರ ಉರ್ವ ಮತ್ತಿತರರು ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ವಿ.ಎಸ್.ಬೇರಿಂಜ ಸ್ವಾಗತಿಸಿದರು. ಸುರೇಶ್ ಕುಮಾರ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.