ಸ್ವಯಂ ಪ್ರೇರಿತ ಕೇಸು ದುರ್ಬಳಕೆಯಾಗುತ್ತಿರುವ ಬಗ್ಗೆ ಆತಂಕವಿದೆ: ಎಸ್ಸೆಸ್ಸೆಫ್
ಮಂಗಳೂರು: ನಗರದ ಮಸೀದಿಯೊಂದರಲ್ಲಿ ಶುಕ್ರವಾರದ ನಮಾಝ್ ವೇಳೆ ಸ್ಥಳಾವಕಾಶದ ಕೊರತೆಯಿಂದ ಮಸೀದಿಯ ಆವರಣ ಗೋಡೆಯ ಪಕ್ಕದ ರಸ್ತೆಯಲ್ಲಿ ನಮಾಝ್ ನಿರ್ವಹಿಸಿರುವ ಕೆಲವೊಂದು ವಿದ್ಯಾರ್ಥಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿರುವ ಬಗ್ಗೆ ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ರಾಜ್ಯ ಸಮಿತಿ ಪ್ರತಿಕ್ರಿಯಿಸಿದೆ.
ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ, ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲ ಹಾಗೂ ದೂರುದಾರರು ಮುಂದೆ ಬರಲು ಭಯಪಡುವಂತಹ ಪ್ರಕರಣಗಳಲ್ಲಿ ದಾಖಲಿಸಬಹುದಾದ ಸುಮೋಟೂ ಕೇಸ್ ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಳಕೆಯಾಗಿರುವುದು ಆತಂಕಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕಂಕನಾಡಿಯ ಮಸೀದಿಯೊಂದರಲ್ಲಿ ಶುಕ್ರವಾರದ ನಮಾಝ್ ನಿರ್ವಹಿಸಿದ್ದರಿಂದ ಯಾವುದೇ ಸಾರ್ವಜನಿಕ ಸಮಸ್ಯೆ ಉಂಟಾಗಿಲ್ಲ. ಬೆರಳೆಣಿಕೆಯ ಮಂದಿ ರಸ್ತೆ ಬದಿಯಲ್ಲಿ ನಿಶಬ್ದವಾಗಿ ಐದಾರು ನಿಮಿಷಗಳ ಕಾಲ ನಮಾಝ್ ನಿರ್ವಹಿಸಿದ್ದಾರೆ. ಇದನ್ನೇ ಕೆಲವು ಕ್ಷುದ್ರ ಶಕ್ತಿಗಳು ಪರ್ವತೀಕರಿಸಿವೆ. ಇಷ್ಟಕ್ಕೆ ಕದ್ರಿ ಠಾಣೆಯಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಾಗಿರುವುದು ಖಂಡನೀಯ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.