ರಾಜ್ಯದಲ್ಲಿ ಕಾಂಗ್ರೆಸ್‌ಗೆ 24 ಸ್ಥಾನ ಗ್ಯಾರಂಟಿ: ಡಾ. ಮಂಜುನಾಥ ಭಂಡಾರಿ

ಮಂಗಳೂರು, ಎ. 23: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟವಾಗಿ 24 ಸ್ಥಾನಗಳನ್ನು ಪಡೆಯಲಿದೆ. ಪಕ್ಷದ ಆಂತರಿಕ ಸಮೀಕ್ಷೆಯ ಪ್ರಕಾರ ದೇಶದಲ್ಲಿಯೂ ಇಂಡಿಯಾ ಮೈತ್ರಿಕೂಟ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾ ಪರಿಷತ್‌ನ ಸದಸ್ಯ ಡಾ. ಮಂಜುನಾಥ ಭಂಡಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಕ್ಷದ ಆತಂರಿಕ ಸಮೀಕ್ಷೆಯ ಲೆಕ್ಕಾಚಾರದ ಕುರಿತು ಮಾಹಿತಿ ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿ ಆಶ್ವಾಸನೆಯ ಮೇರೆಗೆ ಶೇ. 43 ಮತಗಳೊಂದಿಗೆ 135 ಸ್ಥಾನವನ್ನು ಪಕ್ಷ ಪಡೆದಿತ್ತು. ಈ ಮೂಲಕ 18 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ನಿಶ್ಚಳವಾಗಿದೆ. ಕಳೆದ ವಿಧಾನಸಭೆಯ ಗ್ಯಾರಂಟಿ ಯೋಜನೆ ಅನುಷ್ಠಾನ ರಾಜ್ಯದ 1,70,000 ಕುಟುಂಬಗಳಿಗೆ ದೊರೆಯುತ್ತಿದೆ. ಜನರು ಅದರ ಋಣ ತೀರಿಸುತ್ತಾರೆ. ಈ ಮೂಲಕ ಲೆಕ್ಕಾಚಾರದ ಪ್ರಕಾರ ಶೇ. 15ರಷ್ಟು ಹೆಚ್ಚುವರಿ ಮತಗಳು ಕಾಂಗ್ರೆಸ್ ಪರವಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ, ಶೇ. 6ರಿಂದ 7ರಷ್ಟು ಮತಗಳು ಬಿದ್ದರೂ ಪಕ್ಷ 24 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ ಎಂದವರು ಹೇಳಿದರು.
ಈ ಬಾರಿಯ ಲೋಕಸಭಾ ಚುನಾವಣೆ ಜನರ ಬದುಕು ಮತ್ತು ಭಾವನೆಗಳ ನಡುವಿನ ಚುನಾವಣೆ ಎಂದು ಹೇಳಿದ ಅವರು, ಕಾಂಗ್ರೆಸ್ ಪಕ್ಷ ಆರಂಭದಿಂದಲೂ ದೇಶದಲ್ಲಿ ಜನರ ಬದುಕಿನ ಚಿಂತನೆ ಮಾಡಿದ ಪಕ್ಷ. ಇನ್ನೊಂದೆಡೆ ಬಿಜೆಪಿ ಭಾವನಾತ್ಮಕ ವಿಚಾರ ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸುತ್ತಿದೆ. ಎಂದು ಮಂಜುನಾಥ ಭಂಡಾರಿ ಹೇಳಿದರು.
2014ರ ಚುನಾವಣೆಯ ವೇಳೆ 60 ತಿಂಗಳ ಅಧಿಕಾರ ಕೊಡಿ ಕಾಂಗ್ರೆಸ್ ಪಕ್ಷದ 2ಜಿ ಕಲ್ಲಿದ್ದಲು ಪ್ರಕರಣ, ವಿದೇಶದಲ್ಲಿ ಕಪ್ಪು ಹಣ ಎಂದು ಜನರನ್ನು ಮರಳು ಮಾಡಿ ಅಧಿಕಾ ಪಡೆದರು. ಆದರೆ 10 ವರ್ಷ ಆದರೂ ಆ ಹಗರಣವನ್ನು ಸಾಬೀತು ಪಡಿಸಲು ಆಗಿಲ್ಲ. ಕಪ್ಪು ಹಣ ವಾಪಾಸು ತಂದಿಲ್ಲ. ಮತ್ತೆ 2019ರಲ್ಲಿ ಪುಲ್ವಾಮ ದಾಳಿಯಾಯಿತು. ಆದನ್ನು ದೇಶಕ್ಕೆ ಆಪತ್ತು ಎಂದು ಬಿಂಬಿಸಿ, ರಾಮ ಮಂದಿರವನ್ನು ಮುನ್ನಲೆಗೆ ತಂದರು. ಈ ಬಾರಿ ವಿದೇಶಿ ಕೈವಾಗಡಳಿಂದ ನನಗೆ ಕುತ್ತು ಬಂದಿದೆ, ಕರಿಮಣಿ ಸರಕ್ಕೆ ಕುತ್ತು ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಯಾವೊಬ್ಬ ಪ್ರಧಾನಿಯೂ ಇಂತಹ ಹತಾಶೆಯ ಮಾತುಗಳನಾಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭಿವೃದ್ಧಿ, ಉದ್ಯೋಗ ಎಂದರೆ, ಬಿಜೆಪಿ ಭಾವನಾತ್ಮಕ ವಿಚಾರವನ್ನು ಮುಂದಿಡುತ್ತಿದೆ. ಈ ಹತಾಶೆಯ ನುಡಿಗಳಿಗೆ ಮುಖ್ಯ ಕಾರಣ, ಕಳೆದ ವಿಧಾನಸಭಾ ಚುನಾವಣೆಯಲ್ಲಿ 28 ಬಾರಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದರು. 16 ರ್ಯಾಲಿ ನಡೆಸಿದರು. 12 ಬಹಿರಂಗ ಸಭೆಯ ಬಳಿಕವೂ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಪಡೆದಿತ್ತು. ಈ ಬಾರಿಯೂ ಮತ್ತೆ ಮೋದಿಗೆ ಮತ ನೀಡಿ ಎಂದು ಕ್ಷೇತ್ರಗಳಲ್ಲಿ ಕೇಳಲಾಗುತ್ತಿದೆಯೇ ಹೊರತು, ಅಭ್ಯರ್ಥಿ ಅಥವಾ ಪಕ್ಷದ ಪರವಾಗಿ ಮತ ಕೇಳುತ್ತಿಲ್ಲ ಎಂದವರು ಆರೋಪಿಸಿದರು.
1947ರ ನಂತರ ಇದೇ ಮೊದಲ ಬಾರಿಗೆ ಸುಮಾರು 3 ತಿಂಗಳ ಅವಧಿಗೆ ಚುನಾವಣೆ ನಡೆಯುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 35 ದಿನಗಳಲ್ಲಿ ಚುನಾವಣೆ ನಡೆಸಿದ್ದರು. ಆದರೆ ಪ್ರಧಾನಿ ಮೋದಿಯವರಿಗೆ ದೇಶದ ಉದ್ದಗಲಕ್ಕೆ ಓಡಾಡಲು ಪೂರಕ ಅವಕಾಶ ಸಿಗುವಂತಾಗಲು ದೀರ್ಘಾವಧಿಯ ಚುನಾವಣೆ ನಡೆಸಲಾಗುತ್ತಿದೆ. ಚುನಾವಣೆಗೆ ಮುನ್ನ ಚುನಾವಣಾ ಆಯೋಗದ ಸದಸ್ಯರು ರಾಜೀನಾಮೆ ನೀಡಿರುವುದು ಸರ್ವಾಧಿಕಾರಕ್ಕೆ ಮುಂದಾಗುವುದನ್ನು ಪ್ರದರ್ಶಿಸಿದೆ. ಇಲೆಕ್ಟ್ರಾಲ್ ಬಾಂಡ್ ತಂದಿರು ವಬಗ್ಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ್ದರೂ ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಭ್ರಷ್ಟರ ಪಕ್ಷ ಎನ್ನುತ್ತಿದ್ದವರು, ಅಶೋಕ್ ಚವ್ಹಾನ್, ಪ್ರಫುಲ್ ಪಟೇಲ್ ಮೊದಲಾದವರನ್ನು ಭ್ರಷ್ಟರು ಎಂದು ಹೇಳಿ ಇದೀಗ ಅವರನ್ನು ಬಿಜೆಪಿಯ ವಾಶಿಂಗ್ ಮೆಶಿನ್‌ಗೆ ಹಾಕಿ ಕ್ಲೀನ್ ಆಗಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದುತ್ವದ ಪಾಠ ಬಿಜೆಪಿಯಿಂದ ಕಾಂಗ್ರೆಸ್‌ನವರು ಕಲಿಯಬೇಕಾಗಿಲ್ಲ. ಬಿಜೆಪಿ ಹುಟ್ಟುವ ಮೊದಲೇ ಪ್ರತಿ ಗಲ್ಲಿಗಲ್ಲಿಗಳಲ್ಲಿಯೂ ಇಲ್ಲಿ ರಾಮ ಮಂದಿರಗಳಿತ್ತು. ನಮಗೆ ನಮ್ಮ ಹಿರಿಯರು ಅನ್ಯ ಧರ್ಮದವರೊಂದಿಗೆ ಸೌಹಾರ್ದತೆಯಿಂದ ಬಾಳುವ ಹಿಂದುತ್ವವನ್ನು ಕಲಿಸಿದ್ದಾರೆ. ಬಿಜೆಪಿಯ ಕೋಮುವಾದದ ಮುಖವಾಡದ ಹಿಂದುತ್ವ ನಮಗೆ ಬೇಡ ಎಂದು ಹೇಳಿದರು.
ಕಾಂಗ್ರೆಸ್ ರೈತರ ಸಾಲ ಮನ್ನಾ, ಆರೋಗ್ಯ ವಿಮೆ, ಯುವಕರಿಗೆ ಸ್ಟೈಫಂಡ್, ಮಹಿಳೆಯರಿಗೆ ಸ್ವಾಭಿಮಾನದ ಬದುಕಿಗೆ ವರ್ಷಕ್ಕೆ 1 ಲ್ಷ ರೂ.ಗಳ ಅಭಿವೃದ್ಧಿಯ ಪ್ರಣಾಳಿಕೆ ಮುಂದಿಡ್ತಿದೇವೆ. ಆದರೆ ಬಿಜೆಪಿ ಶಿಕ್ಷಣ, ಉದ್ಯೋಗ, ಆರೋಗ್ಯದ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದೆ ಎಂದರು.
ರಾಜ್ಯ ದಿವಾಳಿ ಆಗಿದೆ ಎಂದು ಬೊಬ್ಬಿಡುವ ಬಿಜೆಪಿಯವರೇ, ಕಾಂಗ್ರೆಸ್ ಅವಧಿಯಲ್ಲಿ 2014ರವರೆಗೆ ದೇಶದ ಸಾಲ 55 ಲಕ್ಷ ಕೋಟಿ ಇತ್ತು. ಆದರೆ ಬಿಜೆಪಿಯವರು ಬಂದ ಹತ್ತು ವರ್ಷಗಳಲ್ಲೇ ದೇಶದ ಸಾಲ 150 ಲಕ್ಷ ಕೋಟಿಯಾಗಿದೆ. ಇಷ್ಟು ಸಾಲ ಮಾಡಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದ ಮಂಜುನಾಥ ಭಂಡಾರಿ, ದ.ಕ. ಜಿಲ್ಲೆಯಲ್ಲಿ 15 ವರ್ಷ ಬಿಜೆಪಿ ಸಂಸದರಾಗಿದ್ದವರು ಮಾಡಿದ ಅಭಿವೃದ್ಧಿಯಲ್ಲಿ ಓಟು ಕೇಳಬಹುದಿತ್ತಲ್ಲವೇ?ಆದರೆ ಅದು ಸಾಧ್ಯವಾಗಿದೆ ಪ್ರಧಾನಿ ಮೋದಿ ಕರೆಸಿ ಮತ ಕೇಳುತ್ತಾರೆ. ಕಾಂಗ್ರೆಸ್ ಈ ಬಾರಿ ಕ್ಷೇತ್ರದಲ್ಲಿ ಯುವ ಅಭ್ಯರ್ಥಿಯನ್ನು ನೀಡಿದ್ದು, ಅವರು ಗೆಲ್ಲಲಿದ್ದಾರೆ. ಉಡುಪಿಯಲ್ಲೂ ಗೆಲುವಿನ ಸಂಶಯವಿಲ್ಲ. ಕ್ಷೇತ್ರಗಳಿಗೆ ಭೇಟಿ ನೀಡುವ ಸಂದರ್ಭ ಜನರು ಗ್ಯಾರಂಟಿ ಜತೆಗೆ ಪಕ್ಷದ ಕೊಡುಗೆ ನೆನಪು ಮಾಡುತ್ತಿದ್ದಾರೆ ಎಂದರು.
ಈಶ್ವರಪ್ಪನವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವವರನ್ನು ಪಕ್ಷ ಸ್ವಾಗತಿಸುತ್ತದೆ. ಅದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಮಂಜುನಾಥ ಭಂಡಾರಿ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಮಬಾಬಲ ಮಾರ್ಲ, ಶುಭೋದಯ ಆಳ್ವ, ಅಶ್ವಿನ್ ಕುಮಾರ್ ರೈ, ಲಾರೆನ್ಸ್ ಡಿಸೋಜಾ, ಆರಿಫ್, ಸಂತೋಷ್ ಕುಮಾರ್, ಪ್ರವೀಣ್ ಚಂದ್ರ ಆಳ್ವ, ನೀರಜ್ ಪಾಲ್, ಸುಹಾನ್ ಆಳ್ವ ಮೊದಲಾವದರು ಉಪಸ್ಥಿತರಿದ್ದರು.