ಅರಿಯಡ್ಕದಲ್ಲಿ ಕೈಗಾರಿಕಾ ವಲಯ ನಿರ್ಮಾಣ: ಸಚಿವ ಶರಣಬಸಪ್ಪ
ಭೂಮಿ ಪರಭಾರೆಯಾಗದಂತೆ ಎಚ್ಚರ ವಹಿಸಲು ಸೂಚನೆ
ಮಂಗಳೂರು, ಆ.28: ಪುತ್ತೂರು-ಸುಳ್ಯ ಮಾರ್ಗದಲ್ಲಿರುವ ಅರಿಯಡ್ಕದಲ್ಲಿ 5 ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿದೆ. ಹಾಗಾಗಿ ಅಲ್ಲಿ ಕೈಗಾರಿಕಾ ವಲಯ ನಿರ್ಮಾಣಕ್ಕೆ ಪೂರಕ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಪುರ ಅವರು ಕೆಎಸ್‌ಎಸ್‌ಐಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ಇಲಾಖಾ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಮಾತನಾಡಿದರು.
ದ.ಕ.ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ವ್ಯಾಪ್ತಿಯಲ್ಲಿ ರುವ ಸ್ಥಳಗಳ ಪಟ್ಟಿ ಒದಗಿಸುವಂತೆ ಮತ್ತು ಇಲಾಖೆಯ ವ್ಯಾಪ್ತಿಗೊಳಪಡುವ ಜಾಗಗಳು ಅತಿಕ್ರಮಣವಾಗದಂತೆ ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ಭೂಮಿಗೆ ಒಳ್ಳೆಯ ಬೆಲೆ ಇದೆ. ಈ ನಿಟ್ಟಿನಲ್ಲಿ ಜಮೀನು ಅತಿಕ್ರಮಣವಾಗದಂತೆ ನೋಡಿ ಕೊಳ್ಳಬೇಕು. ಅತಿಕ್ರಮಣವಾಗಿದ್ದಲ್ಲಿ ಅದನ್ನು ತೆರವುಗೊಳಿಸಿ ಬೇಲಿ ಹಾಕಿ ರಕ್ಷಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸಣ್ಣ ಕೈಗಾರಿಕಾ ಘಟಕಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದ ಸಚಿವರು, ಅವುಗಳ ಸ್ಥಾಪನೆಗೆ ಬೇಡಿಕೆ ಯಿರುವ ಬಗ್ಗೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ತಿಳಿಸಿದರು.
ಕೆಲವು ಕಡೆಗಳಲ್ಲಿ ಯುಜಿಡಿ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ ಸಚಿವರು ಪ್ಲಾಸ್ಟಿಕ್ ಪಾರ್ಕ್ ಕ್ಲಸ್ಟರ್ಟ್‌ನಲ್ಲಿ ಸಣ್ಣ ಕೈಗಾರಿಕಾ ಘಟಕಗಳ ಅನುಕೂಲತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹೆಗ್ಡೆ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಸಹಾಯಕ ಮ್ಯಾನೇಜರ್ ರಾಯಪ್ಪ, ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಅಧಿಕಾರಿ ನವಜ್ಯೋತಿ ನಾಯಕ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.