ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ತನಕ ನಿರಂತರ ಹೋರಾಟ: ವೇದವ್ಯಾಸ ಕಾಮತ್
ಮಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂವಿಧಾನದ ರಕ್ಷಣೆ ತಮ್ಮಿಂದ ಮಾತ್ರ ಎಂದು ಹೇಳಿಕೊಂಡು ಓಡಾಡುತ್ತಿರುವ ಕಾಂಗ್ರೆಸಿಗರು ಪ್ರತಿಭಟನೆ ನೆಪದಲ್ಲಿ ರಾಜ್ಯದೆಲ್ಲೆಡೆ ಗಲಭೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಯಾರೇ ಮಾತಾಡಿದರೂ ಅವರು ಸರಿಯಿಲ್ಲ ಅವರು ಬಿಜೆಪಿ ಏಜೆಂಟ್ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದರು.
ಮಂಗಳೂರಿನ ನಗರಪಾಲಿಕೆ ಮುಂಭಾಗ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸಿಗರು ಬಸ್ಸಿಗೆ ಕಲ್ಲು ತೂರಾಟ ಮಾಡಿ ಟೈರ್ಗೆ ಬೆಂಕಿ ಕೊಡುವ ಮೂಲಕ ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸುವ ಬದಲು ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.
ನಮ್ಮ ಹೋರಾಟ ನಿರಂತರವಾಗಿದ್ದು ನಿಯಮ ಬದ್ಧವಾಗಿ ನಿವೇಶನಕ್ಕಾಗಿ ಅರ್ಜಿ ಕೊಟ್ಟು ಕಾಯುತ್ತಿರುವವರಿಗೆ ನ್ಯಾಯ ಸಿಗಬೇಕು. ಅಕ್ರಮವಾಗಿ ಪಡೆದುಕೊಂಡ ಎಲ್ಲ ನಿವೇಶನಗಳನ್ನು ವಾಪಾಸ್ ಕೊಡಬೇಕು. ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕು,ಅಲ್ಲಿಯವರೆಗೆ ಬಿಜೆಪಿ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ’ ಎಂದು ಹೇಳಿದರು.
ಐವನ್ ಡಿಸೋಜ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಅವರ ಋಣ ಸಂದಾಯ ಮಾಡಲು ಅಹಿತಕರ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ವೇದವ್ಯಾಸ ಕಾಮತ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಧುರೀಣರಾದ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಸಂಜಯ್ ಪ್ರಭು, ಪೂರ್ಣಿಮಾ, ದಿವಾಕರ್ ಪಾಂಡೇಶ್ವರ್, ರಮೇಶ್ ಹೆಗ್ಡೆ, ಅಶ್ವಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.