ಕರಾವಳಿಯಲ್ಲಿ ಮುಂದುವರಿದ ಮಳೆ
ಮಂಗಳೂರು, ಸೆ.30: ಕರಾವಳಿಯಲ್ಲಿ ಶನಿವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಇದ್ದು, ಧಾರಾಕಾರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಅಕ್ಟೋಬರ್ 1ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, 2ರಂದು ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ದ.ಕ.ಜಿಲ್ಲೆಯ ಅಲ್ಲಲ್ಲಿ ಮಳೆ ಹಾನಿ ಉಂಟಾಗಿದೆ. ಶನಿವಾರ ದ.ಕ. ಜಿಲ್ಲೆಯಾದ್ಯಂತ ದಿನವಿಡೀ ಭಾರಿ ಮಳೆ ಸುರಿದಿದೆ. ಮಂಗಳೂರಿನಲ್ಲಿ ಮಧ್ಯಾಹ್ನ ವರೆಗೆ ಮಳೆ ತುಸು ಬಿಡುವು ಪಡಕೊಂಡರೂ, ಸಂಜೆಯಿಂದ ಭಾರಿ ಮಳೆ ಮಂದುವರಿದಿದೆ. ಬೆಳ್ತಂಗಡಿ ಘಾಟ್ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಬಂಟ್ವಾಳದ ಮಣಿಪಳ್ಳದಲ್ಲಿ ಹೆಂಚು ಹಾರಿಹೋಗಿ ಮನೆಗಳಿಗೆ ಹಾನಿಯಾಗಿದೆ.
ತುಂಬೆ ಡ್ಯಾಂನಲ್ಲಿ ನೀರಿನ ಒಳಹರಿವು ಹೆಚ್ಚಳಗೊಂಡಿದ್ದು, ಅಣೆಕಟ್ಟೆ ಭರ್ತಿಯಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಆರು ಗೇಟ್‌ಗಳನ್ನು ತೆರೆದಿದ್ದು, 5 ಮೀಟರ್‌ನಲ್ಲಿ ನೀರು ನಿಲ್ಲಿಸಲಾಗಿದೆ ಎಂದು ತಿಳಿಸಿದೆ.
ಬೆಳ್ತಂಗಡಿ ಗರಿಷ್ಠ ಮಳೆ: ಶನಿವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಬೆಳ್ತಂಗಡಿಯಲ್ಲಿ ಗರಿಷ್ಠ 48.2 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಜಿಲ್ಲೆಯ ಸರಾಸರಿ ಮಳೆ 36.7 ಮಿ.ಮೀ. ಆಗಿದೆ. ಬಂಟ್ವಾಳ 49.3 ಮಿ.ಮೀ, ಮಂಗಳೂರು 39.9 ಮಿ.ಮೀ, ಪುತ್ತೂರು 40.9 ಮಿ.ಮೀ, ಸುಳ್ಯ 16.6 ಮಿ.ಮೀ, ಮೂಡುಬಿದಿರೆ 36.6 ಮಿ.ಮೀ, ಕಡಬ 20.4 ಮಿ.ಮೀ, ಮೂಲ್ಕಿ 22.7 ಮಿ.ಮೀ, ಉಳ್ಳಾಲ 43.9 ಮಿ.ಮೀ. ಮಳೆ ವರದಿಯಾಗಿದೆ.