ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಿತರಾದರೆ ದೇಶ ಬಲಿಷ್ಠಗೊಳ್ಳಲು ಸಾಧ್ಯ: ಸ್ಪೀಕರ್ ಯುಟಿ ಖಾದರ್
ಕಲ್ಲಾಪು ಪಟ್ಲ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜೋತ್ಸವ
ಉಳ್ಳಾಲ: ಯಾವುದೇ ಸಮುದಾಯ, ಊರು, ದೇಶವು ಬಲಿಷ್ಠಗೊಳ್ಳಲು ವಿಧಾನ ಸಭೆ, ಪಾರ್ಲಿಮೆಂಟಲ್ಲಿ ಎಸಿ ರೂಮಲ್ಲಿ ಕೂತಿರುವ ಶಾಸಕರು, ಸಂಸದರು, ಮಂತ್ರಿಗಳಿಂದ ಸಾಧ್ಯವಿಲ್ಲ. ಶಾಲಾ ಕ್ಲಾಸ್ ರೂಮಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಲಿತು ಸುಶಿಕ್ಷಿತರಾದರೆ ಮಾತ್ರ ಬಲಿಷ್ಠ ಸಮಾಜ ಮತ್ತು ದೇಶ ಕಟ್ಟಲು ಸಾಧ್ಯ ಎಂದು ವಿಧಾನಸಭಾ ಸಬಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ, ಸಮೂಹ ಸಂಪನ್ಮೂಲ ಕೇಂದ್ರ ಪೆರ್ಮನ್ನೂರು ಮತ್ತು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಲ್ಲಾಪು ಪಟ್ಲ ಇವರ ಸಹಯೋಗದಲ್ಲಿ ಪಟ್ಲ ಶಾಲೆಯಲ್ಲಿ ನಡೆದ ಪೆರ್ಮನ್ನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಕ್ಕಳ ಕೊಡುಗೆಯೂ ಈ ದೇಶಕ್ಕೆ ಅಗತ್ಯ ಇದೆ. ಶಿಕ್ಷಕರು ಊರಿನ ಯುವಕರಲ್ಲಿ ವಿಶ್ವಾಸ ಇಟ್ಟು, ಅವರನ್ನು ಕರೆಸಿ ಚರ್ಚೆ ನಡೆಸಿ ಶಾಲೆಯ ಅಭಿವೃದ್ಧಿಯಲ್ಲಿ ಯುವಕರು ತೊಡಗಿಸುವಂತೆ ಪ್ರೇರೇಪಿಸಬೇಕು. ಯಾವುದೇ ಪ್ರದೇಶದಲ್ಲಿ ಜನಪ್ರತಿನಿಧಿಗಳು,ಶಾಲಾಭಿವೃದ್ಧಿ ಸಮಿತಿ,ಊರವರು ಒಗ್ಗಟ್ಟಾದಾಗ ಆ ಊರಿನ ಶಾಲೆಯು ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ದಿನೇಶ್ ಕುಮಾರ್ ಮಾತನಾಡಿ ಖಾಸಗಿ ಶಾಲೆಗಳು ಕೇವಲ ಅಂಕ ಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಆದರೆ ಸರಕಾರಿ ಶಾಲೆಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಬದುಕು ಸಾಗಿಸಲು ಬೇಕಾದ ಸಾಮಾನ್ಯ ಜ್ನಾನವನ್ನು ಕಲಿಯಲು ಸಾಧ್ಯ ಇದೆ ಎಂದರು.
ವೇದಿಕೆಯಲ್ಲಿ ಸ್ಪೀಕರ್ ಯು.ಟಿ ಖಾದರ್ ಮತ್ತು ಕೆಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರಸ್ತುತ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ಸಹಾಯಕ ಅಭಿಯಂತರರಾಗಿ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಲೀಮ್ ಪಟ್ಲ ಅವರನ್ನು ಸನ್ಮಾನಿಸಲಾಯಿತು.
ಕ್ಲಸ್ಟರ್ ಅಧಿಕಾರಿ ಸುಷ್ಮಾ, ಉಳ್ಳಾಲ ನಗರಸಭಾ ಸದಸ್ಯರಾದ ಬಾಜಿಲ್ ಡಿ ಸೋಜ,ಹಳೇಕೋಟೆ ಶಾಲೆಯ ಮುಖ್ಯ ಶಿಕ್ಷಕರಾದ ಕೆ.ಎಮ್.ಕೆ ಮಂಜನಾಡಿ, ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇಕ್ಬಾಲ್, ಯುವ ಉದ್ಯಮಿ ಮನ್ಸೂರ್, ಪ್ರಮುಖರಾದ ಮುನೀರ್, ಸಲೀಂ, ಉಸ್ಮಾನ್ ಕಲ್ಲಾಪು, ಪಾಲ್ ಡಿ ಸೋಜಾ, ಸುಬೋಧ್, ಸುನಿಲ್ ಡಿ ಸೋಜಾ, ಹಮೀದ್, ಇಸ್ಮಾಯಿಲ್, ಸಾಜಿದ್ ಉಳ್ಳಾಲ್, ವಿದ್ಯಾರ್ಥಿ ಮುಖಂಡ ಸಾಹಿಲ್, ಪಟ್ಲ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಮಹಮ್ಮದ್ ಪಟ್ಲ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಗೀತಾ ಸ್ವಾಗತಿಸಿದರು. ಪಟ್ಲ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ವಂದಿಸಿದರು. ಶಿಕ್ಷಕಿ ವಿನುತ ನಿರೂಪಿಸಿದರು.