ಕೋಮು ದ್ವೇಷ ಸೃಷ್ಟಿಸುವವರನ್ನು ಮಟ್ಟಹಾಕಿ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಿ: ಕರ್ನಾಟಕ ಮುಸ್ಲಿಂ ಜಮಾಅತ್
ʼನ್ಯಾಯದ ಪರ ನಿಲ್ಲಬೇಕಾದ ಕರಾವಳಿಯ ಶಾಸಕರಿಂದ ಅಪರಾಧಿಗಳ ರಕ್ಷಣೆʼ
ಮಂಗಳೂರು: ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ದುರ್ಬಲಗೊಳಿಸಿ ಕೋಮುವೈಷಮ್ಯವನ್ನು ಹರಡಲು ಕೋಮುವಾದಿ ಶಕ್ತಿಗಳು ಬೀದಿಗಿಳಿದಿದ್ದು, ವಿಜಯೋತ್ಸವದ ಹೆಸರಲ್ಲಿ ಅಲ್ಲಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಪ್ರಚೋಧನಕಾರಿ ಘೋಷಣೆಗಳನ್ನು ಕೂಗಲಾಗಿದೆ. ನ್ಯಾಯದ ಪರ ನಿಲ್ಲಬೇಕಾಗಿದ್ದ ಕರಾವಳಿಯ ಕೆಲ ಶಾಸಕರು ಅಪರಾಧಿಗಳಿಗೆ ಅಭಯ ನೀಡುವ, ಅವರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆಂದು ಕರ್ನಾಟಕ ಮುಸ್ಲಿಂ ಜಮಾಅತ್ ಆರೋಪಿಸಿದೆ.
ಮುಸ್ಲಿಮರ ಮಸೀದಿ ಬಗ್ಗೆಯೂ ಅತ್ಯಂತ ಕೀಳುಮಟ್ಟದ ಮತ್ತು ಹಿಂಸೆಗೆ ಪ್ರೇರಣೆ ಕೊಡುವ ಹೇಳಿಕೆಗಳನ್ನು ಕರಾವಳಿಯ ಶಾಸಕರೊಬ್ಬರು ನೀಡಿದ್ದು, ಕರಾವಳಿಯಲ್ಲಿ ಕೋಮುಗಲಭೆಯನ್ನು ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ನಡೆಸಲಾಗುತ್ತಿದೆಯೆಂದು ಕರ್ನಾಟಕ ಮುಸ್ಲಿಂ ಜಮಾಅತ್ ದೂರಿದೆ.
ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸೂಕ್ತ ವ್ಯವಸ್ಥೆ ಮಾಡಬೇಕು, ಕರಾವಳಿಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿ ಹಿಂಸೆಯನ್ನು ಪ್ರಚೋದಿಸುವವರನ್ನು ಮಟ್ಟಹಾಕಬೇಕೆಂದೂ ರಾಜ್ಯ ಸರಕಾರವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಆಗ್ರಹಿಸಿದೆ.
ವಿಚಾರಣೆಯ ನೆಪದಲ್ಲಿ ನಿರಪರಾಧಿಗಳನ್ನು, ಮಹಿಳೆಯರನ್ನು ಬೆದರಿಸುವ ಮತ್ತು ಠಾಣೆಯಲ್ಲಿ ಕೂಡಿಹಾಕುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು ಜಿಲ್ಲಾ ಪೋಲೀಸ್ ಇಲಾಖೆಯ ಪಕ್ಷಪಾತಿ ಧೋರಣೆಯ ಬಗ್ಗೆ ತನಿಖೆ ನಡೆಸಬೇಕೆಂದು ಮುಸ್ಲಿಮ ಜಮಾಅತ್ ಒತ್ತಾಯಿಸಿದೆ.
ಈ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳನ್ನು ಕರ್ನಾಟಕ ಮುಸ್ಲಿಂ ಜಮಾಅತಿನ ನಿಯೋಗ ಭೇಟಿಮಾಡಲಿದ್ದು, ಕರಾವಳಿಯಲ್ಲಿ ನಡೆಯುತ್ತಿರುವ ಪ್ರಸ್ತುತ ವಿಧ್ಯಮಾನಗಳನ್ನು ಸರಕಾರದ ಗಮನಕ್ಕೆ ತರಲಿದೆಯೆಂದು ಮುಸ್ಲಿಮ ಜಮಾಅತ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.