ಬಜ್ಪೆ ವಿಮಾನ ನಿಲ್ದಾಣದ ಬಳಿ ಕ್ರೇನ್ ಪಲ್ಟಿ: ಚಾಲಕ ಮೃತ್ಯು
ಬಜ್ಪೆ: ಇಲ್ಲಿನ ವಿಮಾನ ನಿಲ್ದಾಣದ ನಿರ್ಗಮನ ದ್ವಾರದ ಬಳಿ ನಿಯಂತ್ರಣ ಕಳೆದುಕೊಂಡ ಕ್ರೇನ್‌ವೊಂದು ಮಗುಚಿ ಬಿದ್ದ ಪರಿಣಾಮ ಅದರ ಆಪರೇಟರ್ ಮೃತಪಟ್ಟ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಮೃತರನ್ನು ಕ್ರೇನ್ ಆಪರೇಟರ್ ಯುಪಿ ಮೂಲದ ಅರುಣ್ ಕುಮಾರ್ ಜಾದವ್ ಎಂದು ತಿಳಿದು ಬಂದಿದೆ.
ಕ್ರೇನ್ ಅದ್ಯಪಾಡಿ ಕಡೆಯಿಂದ ವಿಮಾನ ನಿಲ್ದಾಣದ ನಿರ್ಗಮನ ಮಾರ್ಗವಾಗಿ ಕೆಂಜಾರು ಜಂಕ್ಷನ್ ಗೆ ಹೋಗುತ್ತಿತ್ತು. ಈ ವೇಳೆ ಇಳಿಜಾರಾಗಿರುವ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಕ್ರೇನ್ ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಕ್ರೇನ್ ಆಪರೇಟರ್ ಅರುಣ್ ಕುಮಾರ್ ಗಂಭೀರ ಗಾಯಗೊಂಡಿದ್ದು, ತಕ್ಷಣ ಸ್ಥಳೀಯರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರೆಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story