ಸೈಬರ್ ಸೆಕ್ಯುರಿಟಿ: ಐಕ್ಯೂ ಡಾಟ್ ನೆಟ್ ಕಚೇರಿ ಉದ್ಘಾಟನೆ
ಮಂಗಳೂರು: ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಭದ್ರತೆಯನ್ನು ಒದಗಿಸಲು ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಐಕ್ಯೂ ಡಾಟ್ ನೆಟ್ ಸಂಸ್ಥೆಯ ನೂತನ ಕಚೇರಿ ನಗರದ ಕಂಕನಾಡಿಯಲ್ಲಿ ಉದ್ಘಾಟನೆಗೊಂಡಿತು.
ಮಾಜಿ ಮುಖ್ಯ ಸಚೇತಕ ಐವನ್ ಡಿಸೋಜಾ ಅವರು ಕಚೇರಿ ಉದ್ಘಾಟಿಸಿದರು. ಮಂಗಳೂರು ಉಪ ಪೊಲೀಸ್ ಆಯುಕ್ತ ಬಿ.ಪಿ.ದಿನೇಶ್ ಕುಮಾರ್ ಅವರು ಈ ಸಂದರ್ಭ ಮಾತನಾಡಿ, ಡಿಜಿಟಲ್ ತಂತ್ರಜ್ಞಾನವು ಇಂದು ಬದುಕಿನಲ್ಲಿ ಹಾಸುಹೊಕ್ಕಾಗಿರುವಂತೆಯೇ, ಡಿಜಿಟಲ್ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಸೈಬರ್ ಸುರಕ್ಷತೆಯು ಇಂದು ಹೆಚ್ಚು ಮಹತ್ವ ಪಡೆದಿದೆ. ಈ ನಿಟ್ಟಿನಲ್ಲಿ ಐಕ್ಯೂ ಡಾಟ್ ನೆಟ್ ಸಂಸ್ಥೆಯು ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಶೇಕ್ ನಿಹಾಲ್ ಮಾತನಾಡಿ, ಸಂಸ್ಥೆಯು ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಉದ್ಯಮಗಳು, ಗ್ರಾಹಕರಿಗೆ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಒತ್ತು ನೀಡಲಿದೆ. ಸೈಬರ್ ಸುರಕ್ಷತೆಯ ಅರಿವಿನ ಸಂಸ್ಕೃತಿಯನ್ನು ಬೆಳೆಸಲು ಮತ್ತು ಸಾರ್ವಜನಿಕರಿಗೆ ತಮ್ಮ ಡಿಜಿಟಲ್ ಜೀವನವನ್ನು ರಕ್ಷಿಸಲು ಸಂಪನ್ಮೂಲಗಳನ್ನು ಒದಗಿಸಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ರೆಡ್‌ಕ್ರಾಸ್ ಸೊಸೈಟಿ ಜಿಲ್ಲಾಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಫೋರೆನ್ಸಿಕ್ ಸಯನ್ಸ್ ಲ್ಯಾಬ್ ಸೈಬರ್ ಸೆಕ್ಯುರಿಟಿ ಸಂಶೋಧಕ ಡಾ.ತರುಣ್ ಯರ‍್ರಿಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಉದ್ಯಮಿ ಅಜಿತ್ ಚೌಟ, ಐಕ್ ಡಾಟ್ ನೆಟ್ ವ್ಯವಸ್ಥಾಪಕ ನಿರ್ದೇಶಕರಾದ ಅಬೂಬಕ್ಕರ್ ಸಿದ್ದಿಕ್, ಮಹಮ್ಮದ್ ಶರೀಫ್, ಸೊಹೈಲ್ ಶೇಕ್ ಮತ್ತಿತರರು ಇದ್ದರು.