ಬಪ್ಪನಾಡು ರಥೋತ್ಸವದ ವೇಳೆ ವಾಹನಗಳಿಗೆ ಹಾನಿ; ವಿಡಿಯೋ ವೈರಲ್
ಪೈಪ್ ಲೈನ್ ಕಾಮಗಾರಿಯ ಹೊಂಡದಲ್ಲಿ ಹೂತು ಹೋದ ರಥದ ಚಕ್ರ
ಮುಲ್ಕಿ, ಎ.4: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಬ್ರಹ್ಮರಥೋತ್ಸವದ ವೇಳೆ ರಥ ಹಾದು ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿರುವ ಘಟನೆ ಮಾ.31ರಂದು ರಾತ್ರಿ ನಡೆದಿದ್ದು, ಇದೀಗ ಇದರ ವೀಡಿಯೊಗಳು ವೈರಲ್ ಆಗಿವೆ.
ರಥ ಹೋಗುವ ದಾರಿಯಲ್ಲಿ ಕಾರು, ಆಟೊ ರಿಕ್ಷಾ ಹಾಗೂ ಹಲವು ದ್ವಿಚಕ್ರ ವಾಹನಗಳನ್ನ ಪಾರ್ಕಿಂಗ್ ಮಾಡಲಾಗಿತ್ತು. ರಥಕ್ಕೆ ದಾರಿ ಮಾಡಿಕೊಡುವ ಭರದಲ್ಲಿ ಜಮಾಯಿಸಿದ್ದ ಗುಂಪೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು, ರಿಕ್ಷಾ, ದ್ವಿಚಕ್ರ ವಾಹನಗಳನ್ನು ಅನಾಮತ್ತಾಗಿ ಎತ್ತಿ ರಸ್ತೆಯ ಮೇಲ್ಭಾಗಕ್ಕೆ ಎಸೆಯುತ್ತಿರುವ ದೃಶ್ಯಾವಳಿಗಳು ವೀಡಿಯೊದಲ್ಲಿ ಸೆರೆಯಾಗಿದೆ.
ಈ ರೀತಿ ಎಸೆಯಲ್ಪಟ್ಟ ವಾಹನಗಳು ಜಖಂಗೊಂಡಿವೆ. ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಸ್ತೆಯಲ್ಲಿ ಹೂತು ಹೋದ ರಥದ ಚಕ್ರ!
ವಾಹನಗಳನ್ನು ತೆರವುಗೊಳಿಸಿದ ಬಳಿಕ ರಥ ಮುಂದೆ ಸಾಗಿದ್ದು, ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪೈಪ್ ಲೈನ್ ಕಾಮಗಾರಿಗಾಗಿ ತೋಡಲಾಗಿದ್ದ ಹೊಂಡಕ್ಕೆ ರಥದ ಚಕ್ರ ಸಿಲುಕಿ ಹೂತು ಹೋದ ಘಟನೆ ನಡೆದಿದೆ.
ಕ್ಷೇತ್ರದ ತಂತ್ರಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಮತ್ತೆ ರಥ ಎಳೆಯುತ್ತಿದ್ದಂತೆ ಅದರ ಚಕ್ರ ಇನ್ನಷ್ಟು ಹೂತು ಹೋಗಿ ಮತ್ತಷ್ಟು ಆತಂಕದ ಸ್ಥಿತಿ ಎದುರಾಯಿತು. ಬಳಿಕ ಭಕ್ತರು ರಥವನ್ನು ಒಗ್ಗಟ್ಟಿನಿಂದ ಹಿಂದಕ್ಕೆ ಎಳೆದು ಮುಂದಕ್ಕೆ ಸರಾಗವಾಗಿ ಸಂಚರಿಸುವಂತೆ ಮಾಡಿದರು.