7ನೇ ವೇತನ ಆಯೋಗ ಜಾರಿಗೆ ಆಗ್ರಹ: ಗ್ರಾಮೀಣ ಅಂಚೆ ನೌಕರರಿಂದ ಧರಣಿ
ಪುತ್ತೂರು: ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ಮತ್ತು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಪುತ್ತೂರು ಜಂಟಿಯಾಗಿ ಪುತ್ತೂರು ವಿಭಾಗೀಯ ಅಂಚೆ ಕಚೇರಿಯ ಮುಂದೆ 7 ನೇ ವೇತನ ಆಯೋಗ ವರದಿಯ ಸಂಪೂರ್ಣ ಜಾರಿಗೆ ಆಗ್ರಹಿಸಿ ಗುರುವಾರ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಕಾರ್ಯದರ್ಶಿ ಸುನೀಲ್ ದೇವಾಡಿಗ, 2017 ರಲ್ಲಿ 7 ನೇ ವೇತನ ಆಯೋಗ ಜಾರಿಯಾದರೂ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುವ ಮೂಲಕ ಅಂಚೆ ನೌಕರರಿಗೆ ವಂಚನೆ ಮಾಡಿದೆ. ಇದೀಗ 8 ನೇ ವೇತನ ಆಯೋಗ ಜಾರಿಯಾಗುವ ಸಂದರ್ಭದಲ್ಲಿ ಇಂತಹ ಅನ್ಯಾಯ ನಡೆಯಬಾರದು ಎಂದರು.
ಗ್ರಾಮೀಣ ಅಂಚೆ ನೌಕರರು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರಮಾಣಿಕ ಶ್ರಮ ವಹಿಸುತ್ತಿದ್ದಾರೆ. ಅಂಚೆ ನೌಕರರಿಗೆ ಸರಕಾರದಿಂದ ನಿರಂತರ ಅನ್ಯಾಯವಾಗುತ್ತಿದ್ದು, ಇದರ ವಿರುದ್ಧ ರಾಷ್ಟ್ರವಾಪಿ ಒಂದು ದಿನದ ಧರಣಿಗೆ ಕರೆ ನೀಡಲಾಗಿದೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು.
ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವಿಭಾಗೀಯ ಅಧ್ಯಕ್ಷ ವಿಠಲ ಎಸ್. ಪೂಜಾರಿ, ಕೋಶಾಧಿಕಾರಿ ಕಮಲಾಕ್ಷ, ಕಾರ್ಕಳದ ಉಪಾಧ್ಯಕ್ಷ ಅಶೋಕ್, ಜತೆ ಕಾರ್ಯದರ್ಶಿ ಶೇಖರ ಬೆಳ್ತಂಗಡಿ, ದೇವಪ್ಪ ನಾಯ್ಕ್ ಸುಳ್ಯ ಮೊದಲಾದವರು ಪಾಲ್ಗೊಂಡರು.