ಕುಡುಬಿ ಜನಾಂಗ ಪರಿಶಿಷ್ಟ ಜಾತಿ ಪಟ್ಟಿಗೆ ಮರು ಸೇರ್ಪಡೆಗೆ ಒತ್ತಾಯ
ನ.5ರಂದು ಕುಡುಬಿ ಸಂಘದಿಂದ ಹಕ್ಕೊತ್ತಾಯ ಜಾಥ
ಮಂಗಳೂರು, ಅ. 28: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 70000 ಜನಸಂಖ್ಯೆಯನ್ನು ಹೊಂದಿರುವ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರಕಾರ ಹಾಗೂ ನಂತರ ಭಾರತ ಸರಕಾರದಿಂದ ಪರಿಶಿಷ್ಟ ಜಾತಿ ಎಂದು ಗುರುತಿಸಲ್ಪಟ್ಟಿದ್ದ ಕುಡುಬಿ ಜನಾಂಗವನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ದ.ಕ. ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೃಷ್ಣ ಕೊಂಪದವು, ಸಂವಿಧಾನದ ಅನುಚ್ಛೇದ 341(1)ರಂತೆ ಇದ್ದ ಹಕ್ಕನ್ನು ಮರಳಿ ನೀಡಬೇಕು ಎಂದು ಆಗ್ರಹಿಸಿ ನ.5ರಂದು ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನದ ಸೌಧದವರೆಗೆ ಹಕ್ಕೊತ್ತಾಯ ಜಾಥ ನಡೆಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಾಕರಕ್ಕೆ ಬೇಡಿಕೆ ಸಲ್ಲಿಸುವುದಾಗಿ ಹೇಳಿದರು.
ಕುಡುಬಿ ಸಮುದಾಯದ ಜಾನಪದ ಕಲೆಯಾದ ಗುಮ್ಮಟೆ, ಕೋಲಾಟ ತಂಡಗಳೊಂದಿಗೆ ದ.ಕ. ಜಿಲ್ಲೆಯ ಕುಟುಬಿ ಸಮುದಾಯದವರು ಈ ಜಾಥಾದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ರಾಜಕೀಯ ಬೆಂಬಲವಿಲ್ಲದ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ಕುಡುಬಿ ಸಮುದಾಯ ಸಂವಿಧಾನದತ್ತ ಹಕ್ಕನ್ನು ಕಳೆದ 70 ವರ್ಷಗಳಿಂದ ಕಳೆದುಕೊಂಡಿದೆ.1931ರ ಜನಗಣತಿಯಲ್ಲಿ ಕುಡುಬಿ ಸಮುದಾಯ ಖಿನ್ನತೆಗೆ ಒಳಗಾದ ಮೂಲ ನಿವಾಸಿಗಳು (ಡಿಪ್ರೆಸ್ಡ್ ಕಾಸ್ಟ್) ಎಂದು ಗುರುತಿಸಿ ಸೌತ್ ಕೆನರಾ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ, ಮಂಗಳೂರು ತಾಲೂಕಿನಲ್ಲಿ ವಾಸಿಸುತ್ತಿರುವುದಾಗಿ ಗುರುತಿಸಲಾಗಿದೆ. 1936ರಲ್ಲಿ ಬ್ರಿಟಿಷ್ ಸರಕಾರದ ‘ದಿ ಗವರ್ನಮೆಂಟ್ ಆಫ್ ಇಂಡಿಯಾ (ಷೆಡ್ಯೂಲ್ಡ್ ಕಾಸ್ಟ್) ಆರ್ಡರ್ 1936’ ಕಾಯಿದೆಯಲ್ಲಿಯೂ ಕುಡುಬಿ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಗಿದೆ. ಸ್ವಾತಂತ್ರ್ಯ ನಂತರ ಸಂವಿಧಾನದ ಅನುಚ್ಚೇದ 341(1)ರಂತೆ ‘ದಿ ಕಾನ್ಸಿಟ್ಯೂಷನ್ (ಷೆಡ್ಯೂಲ್ ಕಾಸ್ಟ್) ಆರ್ಡರ್ 1950’ ಭಾಗ ಸಂಖ್ಯೆ 5 ಮದರಾಸು ಪ್ರಾಂತ್ಯದ ಪಟ್ಟಿಯಲ್ಲಿಯೂ ಕ್ರಮ ಸಂಕ್ಯೆ 38ರಲ್ಲಿ ಕುಡುಬಿ ಜಾತಿಯನ್ನು ಸೇರಿಸಿ ಸಾಮಾಜಿಕ ರಕ್ಷಣೆಯ ಹಕ್ಕನ್ನು ನೀಡಲಾಗಿತ್ತು. ಆದರೆ ಸಂವಿಧಾನದ 8ನೇ ತಿದ್ದುಪಡಿ (1956ರ ಕಾಯಿದೆ) ಸಂದರ್ಭ ಸೌತ್ ಕೆನರಾ ಜಿಲ್ಲೆಗೆ ಕುಡುಬಪಿ ಜಾತಿಯನ್ನು ಸೇರಿಸುವ ಬದಲು ತಪ್ಪಾಗಿ ‘ಕುಡುಂಬನ್’ ಸೇರಿಸಿರುವುದರಿಂದ ಲೋಪವಾಗಿದೆ. ಬಳಿಕ ಕುಡುಬಿ ಸಮುದಾಯ ಹಿಂದುಳಿದ ಪ್ರವರ್ಗ 1ಕ್ಕೆ ಸೇರಿಸಲ್ಪಟ್ಟಿದ್ದು, ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಅವರು ಆರೋಪಿಸಿದರು.
1972ರಲ್ಲಿ ಸಮುದಾಯದ ಸಂಘಟನೆ ರಚಿಸಿ ಈವರೆಗೂ ರಾಜ್ಯದ ಶಾಸಕರು, ಸಚಿವರು, ಲೋಕಸಭಾ ಸದಸ್ಯರು, ಮುಖ್ಯಮಂತ್ರಿ ಸೇರಿದಂತೆ ವಿವಿಧ ಆಯೋಗಗಳ ಅಧ್ಯಕ್ಷರು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸಮುದಾಯದ ನಿರಂರ ಪ್ರಯತ್ನದ ಫಲವಾಗಿ 2007ರಲ್ಲಿ ಧಾರವಾಡದ ಕನ್ನಡ ವಿವಿಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಟಿ.ಟಿ. ಬಸವನಗೌಡರನ್ನು ಕುಡುಬಿ ಜನಾಂಗದ ಕುಲ ಶಾಸ್ತ್ರೀಯ ಅಧ್ಯಯನ ನಡೆಸಲು ನೇಮಕಾತಿ ಮಾಡಲಾಗಿತ್ತು. ಅವರು ಕುಡುಬಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಮತ್ತೆ ಸೇರ್ಪಡೆ ಮಾಡಲು ಶಿಫಾರಸು ಮಾಡಿ 2008ರಲ್ಲಿ ವರದಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಈವರೆಗೆ ಕ್ರಮವಾಗಿಲ್ಲ. ಸಂವಿಧಾನದ ಅನುಚ್ಚೇದ 341(1)ರಂತೆ ಸಂವಿಧಾನದ ಪರಿಶಿಷ್ಟ ಜಾತಿಗಳ ಆದೇಶ 1950ರಲ್ಲಿ ಹೆಸರಿಸಲಾದ ಯಾವುದೇ ಜಾತಿ ಹೆಸರನ್ನು ತಿದ್ದುಪಡಿ ಮಾಡಿ ತೆಗೆಯುವ ಅವಕಾಶ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯವು ಬಿಹಾರ ರಾಜ್ಯ ಸರಕಾರದ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ. ಹಾಗಾಗಿ ನಮ್ಮ ಹಕ್ಕನ್ನು ಮರಳಿ ಒದಗಿಸಬೇಕೆಂಬ ನಿಟ್ಟಿನಲ್ಲಿ ಇದೀಗ ಸಮುದಾಯ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ ಎಂದವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ, ಸಂಘಟನಾ ಕಾರ್ಯದರ್ಶಿ ಸುಂದರ ಗೌಡ, ಉಪಾಧ್ಯಕ್ಷ ಕೊರ್ಗ್ಯ ಗೌಡ, ಸಂಘಟನಾ ಸದಸ್ಯ ಹೇಮಚಂದ್ರ, ರಾಮ ಗೌಡ, ಉದಯ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.