ಎಲ್ಲ ಪೌರ ಕಾರ್ಮಿಕರ ಖಾಯಂಗೆ ಒತ್ತಾಯ; 2 ತಿಂಗಳಲ್ಲಿ ಕ್ರಮವಾಗದಿದ್ದರೆ ಹೋರಾಟ ಅನಿವಾರ್ಯ: ನಾರಾಯಣ
ಮಂಗಳೂರು, ಸೆ. 13: ಲೋಡರ್ಸ್, ಕ್ಲೀನರ್ಸ್, ಒಳಚರಂಡಿ ಕೆಲಸಗಾರರು, ಚಾಲಕರು ಸೇರಿದಂತೆ ರಾಜ್ಯದಲ್ಲಿ ಬಾಕಿ ಉಳಿದಿರುವ ಪೌರ ಕಾರ್ಮಿಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಎರಡು ತಿಂಗಳೊಳಗೆ ಕ್ರಮದ ಭರವಸೆ ನೀಡಿದ್ದಾರೆ. ಕ್ರಮ ಆಗದಿದ್ದಲ್ಲಿ ಮತ್ತೆ ಹೋರಾಟ ಅನಿವಾರ್ಯ ಎಂದು ಕರ್ನಾಟಕ ರಾಜ್ಯ ನಗರ ಸಭೆ ಪುರಸಭೆ, ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಮೈಸೂರು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸುವುದಾಗಿ ತಿಳಿಸಿತ್ತು. ದ.ಕ . ಜಿಲ್ಲೆಯಾದ್ಯಂತ ಸುಮಾರು 600 ಮಂದಿ ಪೌರ ಕಾರ್ಮಿಕರಲ್ಲಿ ಈಗಾಗಲೇ ಸುಮಾರು 250ರಷ್ಟು ಪೌರ ಕಾರ್ಮಿಕರ ಖಾಯಮಾತಿ ಆಗಿದ್ದು, ಉಳಿದವರನ್ನೂ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಬೆಂಗಲೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ 51000ಕ್ಕೂ ಅಧಿಕ ಪೌರ ಕಾರ್ಮಿಕರು ದುಡಿಯುತ್ತಿದ್ದು, ಅವರಲ್ಲಿ ಶೇ. 90ರಷ್ಟು ಮಹಿಳೆಯರು. ಬೆಳಗ್ಗೆ 5.30ರಿಂದ ಕೆಲಸ ಆರಂಭಿಸುವ ಅವರಿಗೆ ಅಗತ್ಯ ವಿಶ್ರಾಂತಿ ಕೊಠಡಿ, ಶೌಚಾಲಯ, ಬಿಸಿನೀರಿನ ವ್ಯವಸ್ಥೆ ಹಾಗೂ ಸುರಕ್ಷಿತ ಸಲಕರಣೆ ನೀಡಲು ಒತ್ತಾಯಿಸಲಾಗಿದೆ. ಸ್ವಚ್ಛತಾ ಕಾರ್ಮಿಕರೆಲ್ಲರಿಗೂ ಬೆಳಗಿನ ಉಪಹಾರದಲ್ಲಿ ಪೌಷ್ಟಿಕ ಆಹಾರ ನೀಡಬೇಕೆಂದೂ ಒತ್ತಾಯಿಸಲಾಗಿದೆ ಎಂದರು.
ಸಂಘದ ಹಲವು ವರ್ಷಗಳ ಹೋರಾಟದ ಪರಿಣಾಮವಾಗಿ ಗುತ್ತಿಗೆ ಪದ್ಧತಿ ರದ್ಧತಿಗೊಳಿಸುವ ನಿರ್ಧಾರವನ್ನು ಹಿಂದಿನ ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಕೈಗೊಳ್ಳಲಾಗಿತ್ತು. ಅದಾಗಿ ಹಲವು ವರ್ಷಗಳಾದರೂ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಈ ಗುತ್ತಿಗೆ ಪದ್ಧತಿ 2021ರವರೆಗೆ ಮುಂದುವರಿದಿತ್ತು. ಬೆಳಗ್ಗಿನ ಉಪಹಾರಕ್ಕಾಗಿ ನೀಡಲಾಗುವ ಮೊತ್ತವನ್ನು 50 ರೂ.ಗಳಿಗೆ ನಿಗದಿಪಡಿಸಲಾಗಿದ್ದು, ಅದರಲ್ಲಿ ಚಪಾತಿ ಹಾಗೂ ಮೊಟ್ಟೆ ಸೇರಿ ಪೌಷ್ಟಿಕ ಆಹಾರ ನೀಡುವಂತೆ ಆಗ್ರಹಿಸಲಾಗಿದೆ. ಮಂಗಳೂರು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವೊಂದು ಅಧಿಕಾರಿಗಳು ಹಲವಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿರುವುದರಿಂದ ಪೌರ ಕಾರ್ಮಿಕರ ಕುರಿತಾದ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ ಧೋರಣೆಯನ್ನು ತಳೆಯುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಅಧಿಕಾರಿಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಸರಕಾರ ಗಮನ ಹರಿಸಬೇಕು ಎಂದು ಸಂಘದ ರಾಜ್ಯ ಸಂಚಾಲಕ ಡಾ. ಕೆ.ಬಿ. ಓಬಳೇಶ್ ಹೇಳಿದರು.
ಪೌರ ಕಾರ್ಮಿಕರಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ವೈದ್ಯಕೀಯ ತಪಾಸಣೆ ನಡೆಸಬೇಕು. ಮಾಸ್ಟರ್ ಚೆಕ್‌ಅಪ್‌ಗೊಳಪಡಿಸಬೇಕು ಎಂಬ ನಿಯಮವಿದ್ದರೂ ಅದು ಆಗುತ್ತಿಲ್ಲ. ಗಂಭೀರ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಲು ಆದೇಶವಿದೆ. ಪಾಲಿಕೆಯ ಶೇ. 24.10 ನಿಧಿಯಡಿ ಶೇ. 20ರಷ್ಟು ಹಣವನ್ನು ಪೌರ ಕಾರ್ಮಿಕರ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಬಳಸುವ ಕಾರ್ಯಕ್ರಮಗಳಿದ್ದರೂ ಆ ಹಣ ವಿನಿಯೋಗವಾತ್ತಿಲ್ಲ. ಪೌರ ಕಾರ್ಮಿಕರ ದಿನದಂದು ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಗೌರವಿಸಬೇಕೆಂಬ ವ್ಯವಸ್ಥೆ ಜಾರಿಗೊಳಿಸಿದ್ದರೂ ಅದು ನಾಮಕಾವಸ್ತೆ ಮಾತ್ರವೇ ಆಗುತ್ತಿದೆ ಎಂದು ಡಾ. ಓಬಳೇಶ್ ಆರೋಪಿಸಿದರು.
ಹಿಂದೆ ಸಂಘಟನೆಯಲ್ಲಿದ್ದ ನಾಗಣ್ಣ ಗೌಡ ಎಂಬವರು ಸಂಘಟನೆ ವಿರೋಧಿ ಚಟುವಟಿಕೆ ನಡೆಸಿರುವ ಹಿನ್ನೆಲೆಯಲ್ಲಿ ಅವರನ್ನು ಸಂಘಟನೆಯಿಂದ ಉಚ್ಛಾಟಿಸಲಾಗಿದೆ. ನಾವು ಚಾಲಕರು ಸೇರಿದಂತೆ ಎಲ್ಲರನ್ನು ಖಾಯಂಗೊಳಿಸಲು ಒತ್ತಾಯಿಸುತ್ತಿದ್ದರೆ, ಅವರು ಇದೀಗ ವಾಹನ ಚಾಲಕರಿಗೆ ನೇರ ಪಾವತಿ ಮಾಡಬೇಕೆಂದು ಎಂದು ಹೇಳುವ ಮೂಲಕ ಸಂಘಟನೆಯ ನಡುವೆ ಒಡಕು ಮೂಡಿಸುವ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣ ಮೈಸೂರು ಹೇಳಿದರು.
ಗೋಷ್ಟಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶಿವಣ್ಣ ಆರ್., ಪ್ರಧಾನ ಕಾರ್ಯದರ್ಶಿ ಎನ್. ರಾಜ, ಸಂಘಟನಾ ಕಾರ್ಯದರ್ಶಿ ದಾಸ್ ಆರ್., ಕೋಶಾಧಿಕಾರಿ ಯತಿರಾಜ್, ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಆನಂದ್ ಮೊದಲಾದವರು ಉಪಸ್ಥಿತರಿದ್ದರು.