ವೈಟ್‌ಗ್ರೋ ಅಣಬೆ ಕಾರ್ಖಾನೆಯ ಕೈಗಾರಿಕಾ ವಲಯಕ್ಕೆ ಸ್ಥಳಾಂತರಿಸಲು ಆಗ್ರಹ
ಮಂಗಳೂರು: ವಾಮಂಜೂರುವಿನಲ್ಲಿ ಕಾರ್ಯಾಚರಿಸುತ್ತಿರುವ ವೈಟ್‌ಗ್ರೋ ಅಣಬೆ ಪ್ಯಾಕ್ಟರಿ ಘಟಕದಿಂದ ನಾಗರಿಕರು ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ಈ ಉತ್ಪಾದನೆ ಘಟಕವನ್ನು ಜನವಸತಿ ಪ್ರದೇಶವಾದ ವಾಮಂಜೂರಿನಿಂದ ಕೈಗಾರಿಕಾ ವಲಯಕ್ಕೆ ಸ್ಥಳಾಂತರಿಸಬೇಕು ಎಂದು ವೈಟ್ ಗ್ರೋವ್ ಅಣಬೆ ಕಾರ್ಖಾನೆಯ ವಿರುದ್ದದ ಹೋರಾಟ ಸಮಿತಿ ಆಗ್ರಹಿಸಿದೆ.
ಗುರುವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟಗಾರ ಜಗದೀಶ ಶೇಣವ ಸ್ಥಳಾಂತರ ಸಾಧ್ಯವಿಲ್ಲದಿದ್ದರೆ ಸಾರ್ವಜನಿಕ ಹಿತದೃಷ್ಟಿಯಿಂದ ಶಾಶ್ವತವಾಗಿ ಬಂದ್ ಮಾಡಬೇಕು. ಈ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ವೈಟ್ ಗ್ರೋವ್ ಅಣಬೆ ಫ್ಯಾಕ್ಟರಿಯ ವಿರುದ್ದ ಹೋರಾಟ ಸಮಿತಿ ಎಚ್ಚರಿಸಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಆ.19ರ ಬಳಿಕ ತಾಂತ್ರಿಕ ಸಮಿತಿಯ ಶಿಫಾರಸು ಪರಿಗಣಿಸಿ ಫ್ಯಾಕ್ಟರಿಯು ಕಾರ್ಯಾರಂಭ ಮಾಡುವ ಬಗ್ಗೆ ತೀರ್ಮಾನವಾಗಲಿದೆ. ಒಂದು ವೇಳೆ ಸಮಿತಿಯ ವರದಿಯಂತೆ ಫ್ಯಾಕ್ಟರಿ ಆರಂಭವಾಗಿ ಮತ್ತೆ ವಾಸನೆ ಬಂದರೆ ಗ್ರಾಮಸ್ಥರು ಸೇರಿಕೊಂಡು ಫ್ಯಾಕ್ಟರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.
200 ಜನರಿಗೆ ಉದ್ಯೋಗ ನೀಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಕಾಂಪೋಸ್ಟ್ ಘಟಕವನ್ನು ತಂತ್ರಜ್ಞಾನ ಬಳಸಿ ಭಾರತ ದಲ್ಲಿ ಎಲ್ಲಿಯೂ ಇಲ್ಲದ ಮಾದರಿಯಲ್ಲಿ ಮುಚ್ಚಲಾಗಿದೆ ಎಂದು ಫ್ಯಾಕ್ಟರಿಯ ವ್ಯವಸ್ಥಾಪಕ ನಿರ್ದೇಶಕ ಜೆ.ಆರ್.ಲೋಬೋ ಅವರು ಇತ್ತೀಚೆಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, 200 ಜನರ ಉದ್ಯೋಗ ನೆಪದಲ್ಲಿ 20 ಸಾವಿರ ಜನರಿಗೆ ಆರೋಗ್ಯ ಸಮಸ್ಯೆ ತಂದೊಡ್ಡುವ ಈ ಯೋಜನೆಯೇ ಅಗತ್ಯವಿಲ್ಲ. ಜತೆಗೆ ಭಾರತದಲ್ಲಿಯೂ ಎಲ್ಲಿಯೂ ಜನವಸತಿ ಪ್ರದೇಶದಲ್ಲಿ ಇಂತಹ ಕಾಂಪೋಸ್ಟ್ ಘಟಕಗಳೇ ಇಲ್ಲ. ಹೀಗಾಗಿ ಮುಚ್ಚುವ ಪ್ರಮೇಯ ಎಲ್ಲಿಯೂ ಎದುರಾಗಿಲ್ಲ ಎಂದವರು ದೂರಿದರು. ಫ್ಯಾಕ್ಟರಿಯಿಂದ ಬರುವ ನೀರು ಕೂಡ ಕಲುಷಿತಗೊಂಡು ಗುರುಪುರ ನದಿ ಸೇರುತ್ತಿದೆ. ಅತಿಯಾದ ವಾಸನೆಯಿಂದ ಜನರಿಗೆ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಪ್ರಮುಖರಾದ ಓಂ ಪ್ರಕಾಶ್ ಶೆಟ್ಟಿ, ಲಕ್ಷ್ಮಣ, ಜಯಂತಿ, ಜಯಪ್ರಭ, ರಿಯಾಝ್ ಅಹಮ್ಮದ್, ವಿಲಿಯಂ ಡಿಸೋಜ ಮುಂತಾದವರು ಹಾಜರಿದ್ದರು.