ಜಾತ್ರೆ ವ್ಯಾಪಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಸಾಂದರ್ಭಿಕ ಚಿತ್ರ
ಮಂಗಳೂರು, ಆ.17: ದ.ಕ. ಮತ್ತು ಉಡುಪಿ ಜಿಲ್ಲೆಯ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರ ಮಾಡುವವರಿಗೆ ಅಡ್ಡಿಪಡಿ ಸುವವರ ವಿರುದ್ಧ ಕೋಮು ನಿಗ್ರಹ ದಳವು ನಿಗಾ ವಹಿಸಿ ಕಠಿಣ ಕ್ರಮ ಜರಗಿಸಬೇಕು ಮತ್ತು ಉಭಯ ಜಿಲ್ಲಾಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದ.ಕ. ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಹಾಗೂ ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ ಒತ್ತಾಯಿಸಿದೆ.
ನಗರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ಮತ್ತು ಶ್ರೇಯೋಭಿವೃದ್ಧಿ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ‘ದ.ಕ.ಮತ್ತು ಉಡುಪಿ ಜಿಲ್ಲೆಗಳ ಸರ್ವಧರ್ಮ ಕ್ಷೇತ್ರಗಳ ಜಾತ್ರೆ, ಆಯನ, ಉತ್ಸವ, ಉರೂಸ್ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂತೆ ವ್ಯಾಪಾರಿ ಗಳ ನಡುವೆ ಕೋಮು ವೈಷಮ್ಯ ಸೃಷ್ಟಿಸಿ ವ್ಯಾಪಾರಕ್ಕೆ ಅಡ್ಡಿಪಡಿಸಲಾಗುತ್ತದೆ. ಬ್ಯಾನರ್ ಹಾಕಿ ಕೀಳುಮಟ್ಟದ ರಾಜಕಾರಣ ಮಾಡಲಾಗುತ್ತದೆ. ಏಲಂ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ವ್ಯಾಪಾರ ಮಾಡುವವರ ಮಧ್ಯೆ ಸಮಸ್ಯೆ ಹುಟ್ಟು ಹಾಕಿ ಪರಸ್ಪರ ಎತ್ತಿ ಕಟ್ಟಲಾಗುತ್ತದೆ.ಇದರಿಂದ ಹಲವು ವರ್ಷಗಳಿಂದ ನಡೆದುಕೊಂಡು ಬರುವ ಜಾತ್ರಾ ಮಹೋತ್ಸವಗಳಲ್ಲಿ ಸಂತೆ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳಲ್ಲಿ ಅಭದ್ರತೆಯ ವಾತಾವರಣ ಸೃಷ್ಟಿಯಾಗಿವೆ ಎಂದು ಆಪಾದಿಸಿದರು.
2021ರ ಡಿಸೆಂಬರ್ 17ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ 1997 ಹಾಗೂ 2002ರ ನಿಯಮಗಳು ಉಲ್ಲಂಘನೆಯಾಗದಂತೆ ಧಾರ್ಮಿಕ ಕ್ಷೇತ್ರ ಗಳಲ್ಲಿ ಹಿಂದೂಯೇತರ ಸಮುದಾಯದವರಿಗೆ ಜಾತ್ರೆ ಸಮಯದಲ್ಲಿ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ದೇವಾಲಯದ ಪರಿಧಿ ಹೊರತುಪಡಿಸಿ ಉಳಿದ ಜಾಗಗಳಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 2023ರ ಆಗಸ್ಟ್ 11ರಂದು ಆದೇಶ ಹೊರಡಿಸಿದ್ದಾರೆ. ಆದಾಗ್ಯೂ ಕೆಲವು ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿವೆ. ಈ ಮೂಲಕ ಕೋಮುಸಂಘರ್ಷ ಸೃಷ್ಟಿಸಲು ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.
ಎರಡೂ ಜಿಲ್ಲೆಗಳ ಜಿಲ್ಲಾಡಳಿತವು ಸರ್ವಧರ್ಮ ಕ್ಷೇತ್ರಗಳಲ್ಲಿ ವ್ಯಾಪಾರ ನಡೆಸುವವರಿಗೆ ಸೂಕ್ತ ಭದ್ರತೆ ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಅರ್ಜಿ ಪಡೆದು ನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಆಡಳಿತವು ಜಾತ್ರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಈ ವ್ಯಾಪಾರಿಗಳ ಮೇಲೆ ದಾಂಧಲೆ ಮಾಡುವುದು ಅನೈತಿಕ ಪೊಲೀಸ್ಗಿರಿಗೆ ಸಮವಾಗಿದೆ. ಹಾಗಾಗಿ ಕೋಮು ನಿಗ್ರಹ ದಳವು ಎಚ್ಚೆತ್ತುಕೊಳ್ಳಬೇಕು. ಈ ಬಗ್ಗೆ ಉಭಯ ಜಿಲ್ಲೆಗಳ ಅಡಳಿತವು ನಿರ್ಲಕ್ಷ್ಯ ತಾಳಿದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಸುನೀಲ್ ಕುಮಾರ್ ಬಜಾಲ್ ಮತ್ತು ಬಿ.ಕೆ.ಇಮ್ತಿಯಾಝ್ ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಸರಕಾರ ಬದಲಾಗಿದೆ. ಆದರೆ ಆಡಳಿತ ವ್ಯವಸ್ಥೆ ಬದಲಾಗಿಲ್ಲ. ಅಧಿಕಾರಿಗಳು ಕಾನೂನನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ರಾಜ್ಯ ಸರಕಾರ ಈ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷ ಭರತ್ ಜೈನ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಡ್ರಸ್, ಕೋಶಾಧಿಕಾರಿ ಮುಹಮ್ಮದ್ ಶಫಿ, ಸಂಚಾಲಕ ಕವಿರಾಜ್ ಉಡುಪಿ, ಉಪಾಧ್ಯಕ್ಷ ಆರೀಫ್ ಉಡುಪಿ, ಮುಖಂಡರಾದ ಪ್ರವೀಣ್ ಕುಮಾರ್ ವಾಮಂಜೂರು, ಪ್ರವೀಣ್ ಕುಮಾರ್ ಕದ್ರಿ ಹಾಗೂ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ, ಕೋಶಾಧಿಕಾರಿ ಆರೀಫ್ ಬಾವಾ ಮತ್ತಿತರರು ಉಪಸ್ಥಿತರಿದ್ದರು.