ಮಂಗಳೂರು ಸ್ಟೇಟ್ ಬ್ಯಾಂಕ್ ನಲ್ಲಿ ಸಿಟಿ ಬಸ್ ನಿಲ್ದಾಣ ಮುಂದುವರಿಸಲು ಒತ್ತಾಯ

ಮಂಗಳೂರು, ಜು.13: ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಸಿಟಿ ಬಸ್ ನಿಲ್ದಾಣವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿರುವ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಸ್ಥರ ಒಕ್ಕೂಟ, ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಮುಖರಾದ ಶ್ರೀನಿವಾಸ್, ಸಿಟಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿರುವುದರಿಂದ ನಮಗೆ ಶೇ.15ರಷ್ಟು ಕೂಡ ವ್ಯಾಪಾರ ಆಗುತ್ತಿಲ್ಲ. ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದು, ಕಟ್ಟಡದ ಬಾಡಿಗೆ ಕೂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಸ್ ನಿಲ್ದಾಣವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಕಳೆದ 50ರಿಂದ 60 ವರ್ಷಗಳಿಂದಿದ್ದ ಇಲ್ಲಿ ರಸ್ತೆ ಬದಿಯೇ ಬಸ್ಗಳನ್ನು ನಿಲ್ಲಿಸಲಾಗುತ್ತಿತ್ತು. ಈಗ ಏಕಾಏಕಿ ಬದಲಾಯಿಸಿರುವುದರಿಂದ ವ್ಯಾಪಾರಸ್ಥರು ಜೀವನ ನಡೆಸಲು ಕಷ್ಟವಾಗಿದೆ. ಸದ್ಯ ಸರ್ವೀಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಇಲ್ಲ. ರಾವ್ ಆ್ಯಂಡ್ ರಾವ್ ವೃತ್ತ ಮತ್ತು ಸರ್ವೀಸ್ ಬಸ್ ನಿಲ್ದಾಣ ಈ ಎರಡೂ ಕಡೆಯಿಂದ ಒಟ್ಟಾಗಿ ಬಸ್ ಹೊರಡುವುದರಿಂದ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ ಎಂದರು.
ಸ್ಟೇಟ್ಬ್ಯಾಂಕ್ ಬಳಿ ಸಿಟಿ ಬಸ್ ನಿಲ್ದಾಣ ಬಂದರೆ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ. ಈಗ ಇಲ್ಲಿನ ರಸ್ತೆಯೂ ಅಗಲವಾಗಿದ್ದು, ಸಮರ್ಪಕ ಬಸ್ ಶೆಲ್ಟರ್ ನಿರ್ಮಾಣದ ಭರವಸೆಯನ್ನೂ ಸ್ಥಳೀಯಾಡಳಿತ ನೀಡಿದೆ. ಯಾವುದೇ ಸರ್ವೇ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಬಸ್ ನಿಲ್ದಾಣ ಸ್ಥಳಾಂತರ ಸರಿಯಲ್ಲ. ಈ ಕುರಿತಂತೆ ಈಗಾಗಲೇ ಸ್ಥಳೀಯಾಡಳಿತ, ಜಿಲ್ಲಾಡಳಿತ, ಸ್ಮಾರ್ಟ್ಸಿಟಿ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಜಯ ಶೆಟ್ಟಿ ಎಕ್ಕೂರು, ಮುಹಮ್ಮದ್ ಆಸಿಫ್, ಮುಹಮ್ಮದ್ ಇಕ್ಬಾಲ್, ನಾಗರಾಜ್ ಉಪಸ್ಥಿತರಿದ್ದರು.