ದಲಿತರ ಬೇಡಿಕೆಗಳು ಮುಖ್ಯಮಂತ್ರಿ- ಸಚಿವರ ಗಮನಕ್ಕೆ: ಸ್ಪೀಕರ್ ಯು.ಟಿ.ಖಾದರ್
ದ.ಕ., ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ, ಪಂಗಡಗಳ ಮಹಾಸಂಗಮ ಮತ್ತು ಬೇಡಿಕೆಗಳ ಹಕ್ಕೊತ್ತಾಯ ಕಾರ್ಯಕ್ರಮ
ಮಂಗಳೂರು, ಜು. 30: ದಲಿತರ ಪ್ರಮುಖ ಹಕ್ಕೊತ್ತಾಯವಾದ ಡಿಸಿ ಮನ್ನಾ ಭೂಮಿಯ ಹಂಚಿಕೆ ಸೇರಿದಂತೆ ಮಹಾಸಂಗಮದಲ್ಲಿ ದಲಿತ ಸಂಘಟನೆಗಳಿಂದ ವ್ಯಕ್ತವಾದ ಬೇಡಿಕೆಗಳನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಜತೆ ಚರ್ಚಿಸುವುದಾಗಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ಮಂಗಳೂರಿನ ಉರ್ವಸ್ಟೋರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸಲಾದ ದ.ಕ. ಮತ್ತು ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಾಸಂಗಮ ಮತ್ತು ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಒಗ್ಗಟ್ಟಿನಿಂದ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ ಎಂಬ ವಿಶ್ವಾಸ ಮೂಡಿದಾಗ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ದಲಿತ ಸಂಘಟನೆಗಳು ತಮ್ಮೆಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸೌಹಾರ್ದತೆಯಿಂದ ಒಂದಾಗಿರುವುದು ಸಂತಸದ ವಿಚಾರ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ.ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ, ಉಭಯ ಜಿಲ್ಲೆಗಳಲ್ಲಿ ತಮ್ಮದೇ ಆದ ಸಾಂಸ್ಕೃತಿಕ ಕೊಡುಗೆಗಳನ್ನು ನೀಡಿರುವ ದಲಿತ ಸಮುದಾಯಗಳು ವಿವಿಧ ಕಾರಣಗಳಿಂದ ಬೇರೆಯಾಗಿದ್ದವು. ಅವರನ್ನು ಒಗ್ಗೂಡಿಸುವ ಕೆಲಸ ಮಾಡಲಾಗಿದ್ದು, ದಲಿತರ ಹಕ್ಕೊತ್ತಾಯಗಳಿಗಾಗಿ ಧ್ವನಿ ಎತ್ತಲಾಗುತ್ತಿದೆ ಎಂದರು.
ಬ್ರಿಟಿಷರ ಅವಧಿಯಲ್ಲಿಯೇ ದ.ಕ. ಜಿಲ್ಲೆಯಲ್ಲಿ 8450 ಎಕರೆ ಭೂಮಿ ಡಿಸಿ (ಡಿಪ್ರೈವ್ಡ್ ಕ್ಲಾಸ್) ಮನ್ನಾ ಜಾಗವನ್ನು ಮೀಸಲಿಡಲಾಗಿತ್ತು. 5300 ಎಕರೆ ಭೂಮಿಯನ್ನು ಮಾತ್ರವೇ ದಲಿತರಿಗೆ ಹಂಚಲಾಗಿದ್ದು, ಉಳಿದ ಭೂಮಿ ಹಲವು ಶಿಕ್ಷಣ ಸಂಸ್ಥೆಗಳು, ಪ್ರಭಾವಿ ವ್ಯಕ್ತಿಗಳಿಂದ ಅತಿಕ್ರಮಣವಾಗಿವೆ. ಡಿಪ್ರೈವ್ಡ್ ಕ್ಲಾಸ್ ಎಂದರೆ ಯಾರು ಎಂಬ ಬಗ್ಗೆ ಚರ್ಚೆ ಸದ್ಯ ನಡೆಯುತ್ತಿದೆ. ಆದರೆ, ಶಾಲೆ, ದೇವಸ್ಥಾನಗಳಿಂದ ಹೊರಗುಳಿದು ಅಸ್ಪೃಶ್ಯರಾಗಿ ಬದುಕಿದವರೇ ಈ ಭೂಮಿಯ ಹಕ್ಕುದಾರರಾಗಿದ್ದು, ಡಿಸಿ ಮನ್ನಾದಡಿ ಇರುವ ಉಳಿಕೆ ಜಮೀನನ್ನು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ನೀಡಬೇಕು ಎಂದು ಅಶೋಕ್ ಕೊಂಚಾಡಿ ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಮಾಜಿ ಸಚಿವ ರಮನಾಥ ರೈ, ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಅಭಯ ಕುಮಾರ್, ದಲಿತ ಮುಖಂಡ ಚಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಖ್ಯಾತ ಕೊಳಲು ವಾದಗ ಪಾಂಡುರಂಗ ಪಡ್ಡಮೆ ಹಾಗೂ ಎಂ. ಸಂಕಪ್ಪ ಕಾಂಚನ್ ಮತ್ತು ಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜಾ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಉಪ ಪ್ರಧಾನ ಸಂಚಾಲಕ ರಮೇಶ್ ಕೋಟ್ಯಾನ್, ತುಳು ಪರಿಷತ್ ಅಧ್ಯಕ್ಷ ತಾರನಾಥ್ ಗಟ್ಟಿ, ಉಡುಪಿಯ ದಲಿತ ಸಂಘಟನೆಗಳ ಐಕ್ಯತಾ ಸಮಿತಿಯ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯೂರು, ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ಶೇಖರ್ ಕುಕ್ಕೋಡಿ, ಸುಭಾಷ್, ಸುಂದರ ಮೇರ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು ಸ್ವಾಗತಿಸಿ, ರೋಹಿದಾಸ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
ಮಹಾಸಂಗಮದ ಪ್ರಮುಖ ಹಕ್ಕೊತ್ತಾಯಗಳು
*ಮಂಗಳೂರು ನಗರದಲ್ಲಿ 28 ವರ್ಷಗಳ ಹಿಂದೆ ಘೋಷಣೆಯಾದ ಡಾ. ಅಂಬೇಡ್ಕರ್ ವೃತ್ತ(ಜ್ಯೋತಿ ವೃತ್ತ)ವನ್ನು ನಿರ್ಮಾಣ ಮಾಡಿ ನಾಮಕರಣಗೊಳಿಸಬೇಕು.
*ದ.ಕ. ಜಿಲ್ಲೆಯಲ್ಲಿ ದಲಿತರ ಪರವಾಗಿ ಸಾಮಾಜಿಕ ಬದಲಾವಣೆಗೆ ಕಾರಣರಾದ ಕುದ್ಮುಲ್ ರಂಗರಾವ್ ಅವರ ಹೆಸರಲ್ಲಿ ಸ್ಮಾರಕ ಕಟ್ಟಡ ನಿರ್ಮಿಸಿ ಅವರ ಜೀವನ ಚರಿತ್ರೆ ಅನಾವರಣಗೊಳಿಸಬೇಕು.
*ಶಿಬಾಜೆಯ ದಲಿತ ಯುವಕ ಶ್ರೀಧರ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗಬೇಕು.
* ಪರಿಶಿಷ್ಟರ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1ರಲ್ಲಿನ ಮೀನುಗಾರ ಮೊಗೇರರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಂಚಿಸಲಾಗಿದೆ. ರಾಜ್ಯ ಸರಕಾರ 2003ರ ಎಚ್.ಕೆ. ಭಟ್ ವರದಿಯನ್ನು ಜಾರಿಗೊಳಿಸಿ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಠಿಣ ಕ್ರಮ ವಹಿಸಬೇಕು.
*ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿ ನಿರುದ್ಯೋಗಿ ಯುವಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿ 5 ಲಕ್ಷರೂ.ನಿಂದ 1 ಲಕ್ಷ ರೂ.ಗಳಿಗೆ ಇಳಿಕೆಯಾಗಿದ್ದು, ಅದನ್ನು ಸರಿಪಡಿಸಿ, ನಿಗಮದ ಮೂಲಕೇ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವಂತಾಗಬೇಕು ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಟ 1 ಕೋಟಿ ರೂ. ಅನುದಾನ ಮೀಸಲಿಡಬೇಕು.
*ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉನ್ನತ ಶಿಕ್ಷಣ ಪಡೆಯುವ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ವಹಿಸುವಂತೆ ಕ್ರಮ ವಹಿಸಬೇಕು.
ರಾಜ್ಯ ಮಟ್ಟದ ಅಧಿಕಾರಿ- ಸಚಿವರ ಸಭೆಗೆ ಕ್ರಮ: ರಮಾನಾಥ ರೈ
ಉಭಯ ಜಿಲ್ಲೆಗಳ ದಲಿತರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಸಚಿವರು ಮತ್ತು ಅಧಿಕಾರಿಗಳ ಸಭೆಗೆ ಕ್ರಮ ವಹಿಸುವುದಾಗಿ ಮಾಜಿ ಸಚಿವ ಬಿ. ರಮಾನಾಥ ರೈ ಭರವಸೆ ನೀಡಿದರು.
ಮಹಾಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಡಿಸಿ ಮನ್ನಾ ಜಾಗ ಇತ್ಯರ್ಥಕ್ಕೆ ಪ್ರಯತ್ನ ಮಾಡಿದರೂ ಪರಿಹಾರ ಆಗಿಲ್ಲ. ಈ ಬಾರಿಯ ಚುನಾವಣೆಯ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಈ ಸಮಸ್ಯೆ ಇತ್ಯರ್ಥ ಪಡಿಸಲು ಸರಕಾರ ಕ್ರಮ ವಹಿಸುವ ವಿಶ್ವಾಸವಿದೆ. ಮಾತ್ರವಲ್ಲದೆ ದಲಿತರ ಹಲವು ಬೇಡಿಕೆಗಳಿಗೆ ಈ ನೂತನ ರಾಜ್ಯ ಸರಕಾರದಲ್ಲಿ ಹೆಚ್ಚಿನ ಮಹತ್ವ ಸಿಗಲಿದೆ ಎಂದರು.
ಮಹಾಸಂಗಮಕ್ಕೆ ಸಾಕ್ಷಿಯಾದ ಅಂಬೇಡ್ಕರ್ ಭವನ
ದ.ಕ. ಜಿಲ್ಲೆಯ ವಿವಿಧ ಸಂಘಟನೆಗಳ ಹೋರಾಟದ ಫಲವಾಗಿ ಉರ್ವಾಸ್ಟೋರ್‌ನಲ್ಲಿ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪ್ರತಿನಿಧಿಗಳ ಮಹಾ ಸಂಗಮಕ್ಕೆ ಸಾಕ್ಷಿಯಾಯಿತು. ಭವನದ ಎದುರು ನೀಲಿ ತೋರಣ, ಸಮನ್ವಯ ಸಮಿತಿಯ ಪ್ರತಿನಿಧಿಗಳು ನೀಲಿ ಬಣ್ಣದ ಶಾಲು, ಪೇಟದೊಂದಿಗೆ ಕಂಗೊಳಿಸಿದರು. ಅತಿಥಿಗಳಿಗೂ ನೀಲಿಬಣ್ಣದ ಶಾಲಿನ ಮೂಲಕ ಸ್ವಾಗತ ನೀಡಲಾಯಿತು.